ಹುಬ್ಬಳ್ಳಿ: ಹಣಕಾಸು ವಿಚಾರಕ್ಕೆ ಪತಿಯು ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಬಳಿಕ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾದ ಘಟನೆ ಗೋಕುಲ್ ರಸ್ತೆಯ ರಾಮಲಿಂಗೇಶ್ವರ ನಗರದಲ್ಲಿ ಸೋಮವಾರ ನಡೆದಿದೆ.
ಮಾಸಬ್ಬಿ (೨೮) ಕೊಲೆಯಾದ ಮಹಿಳೆ. ಇರ್ಫಾನ್ ಕೊಲೆ ಮಾಡಿದ ಆರೋಪಿ ಪತಿ (೩೨). ಇರ್ಫಾನ್ ಮೂಲತಃ ಗಾಂಧೀವಾಡದ ನಿವಾಸಿಯಾಗಿದ್ದು, ದಂಪತಿ ಎರಡು ತಿಂಗಳ ಹಿಂದೆಯಷ್ಟೇ ರಾಮಲಿಂಗೇಶ್ವರ ನಗರಕ್ಕೆ ಬಂದು ನೆಲೆಸಿದ್ದರು. ಗಾರೆ ಕೆಲಸ ಮಾಡುತ್ತಿದ್ದ ಇರ್ಫಾನ್, ಹಣಕಾಸು ವಿಚಾರವಾಗಿ ಸೋಮವಾರ ಪತ್ನಿಯೊಂದಿಗೆ ಜಗಳಕ್ಕೆ ಮುಂದಾಗಿದ್ದ. ಜಗಳ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಗೋಕುಲ ಠಾಣಾ ಪೊಲೀಸಲು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಬಳಿಕ ಆರೋಪಿ ಇರ್ಫಾನ್ ಸ್ವತಃ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ಧಾರೆ.

