ಬೆಂಗಳೂರು: ನನಗೆ ಕೆಪಿಸಿಸಿ ಅಧ್ಯಕ್ಷನಾಗುವ ಸೂಚನೆ ಹೈಕಮಾಂಡ್ ನಿಂದ ಸಿಗುವ ಸಾಧ್ಯತೆ ಇದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೊಸ ರಾಜಕೀಯ ಬಾಂಬ್ ಸಿಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆ ಬದಲಾವಣೆ ಬಗ್ಗೆ ಪಕ್ಷದ ಶಾಸಕರು, ಸಚಿವರು, ಮುಖಂಡರು ಯಾರೂ ಮಾತನಾಡಬಾರದು ಎಂದು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.
ಆದರೆ ಇಂದು ಈ ಸೂಚನೆಗೆ ಕ್ಯಾರೇ ಅನ್ನದ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಾವೇ ಮುಂದಿನ ಕೆಪಿಸಿಸಿ ಅಧ್ಯಕ್ಷರು ಎನ್ನುವ ದಾಟಿಯಲ್ಲಿ ಹೇಳಿಕೆ ನೀಡಿ ಡಿ.ಕೆ.ಶಿವಕುಮಾರ್ ಅವರಿಗೆ ಭಯ ಸೃಷ್ಟಿಸಿದ್ದಾರೆ.
ಸಚಿವ ಕೆ.ಎನ್.ರಾಜಣ್ಣ ಈ ಬಗ್ಗೆ ಹೇಳಿದ್ದಿಷ್ಟು…
“ರಾಜಕೀಯದಲ್ಲಿ ಯಾವ ಗಳಿಗೆಯಲ್ಲಿ ಏನು ಬೇಕಾದರೂ ಆಗಬಹುದು, ಹಿಂದೆ ರಾಜ್ಯದ ಸಿಎಂ ಆಗಿದ್ದ ದೇವೇಗೌಡರಿಗೆ ಪ್ರಧಾನಿಯಾಗ್ತೀನಂತ ಸ್ವತಃ
ಅವರಿಗೇ ಗೊತ್ತಿರಲಿಲ್ಲ, ಆದರೆ ದೆಹಲಿಗೆ ಹೋಗಿ ಬಂದ ನಂತರ ಆಗ ದೇವೇಗೌಡರಿಗೆ ಗೊತ್ತಾಯ್ತು ನಾನು ಪ್ರಧಾನವಾಗ್ತಿದ್ದೀನಂತ.
ಇದೇ ರೀತಿ ರಾಜ್ಯದ ರಾಜಕೀಯದಲ್ಲೂ ಏನು ಬೇಕಾದರೂ ಆಗಬಹುದು. ನನಗೂ ಸಹ ಡಿಸಿಎಂ ಆಗಬೇಕೆಂಬ ಆಸೆಯಿದೆ, ಆದರೆ ಒಂದು ವೇಳೆ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಲು ಹೈಕಮಾಂಡ್ ಒಪ್ಪಿದರೆ ತಕ್ಷಣವೇ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡ್ತೀನಿ. ಆದರೆ ನನಗೆ ಯಾವ ಹುದ್ದೆ ಕೊಡಬೇಕೆಂದು ನಿರ್ಧರಿಸುವುದು ಕಾಂಗ್ರೆಸ್ ಹೈಕಮಾಂಡ್. ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನು ಅದಕ್ಕೆ ಬದ್ಧ. ಆದರೆ ನನಗೆ ಈಗ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲ ಇದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಇದೇ ವೇಳೆ ಒಕ್ಕಲಿಗರ ಸ್ವಾಮೀಜಿ ಚಂದ್ರಶೇಖರ ಶ್ರೀಗಳು ಸಿಎಂ ಹುದ್ದೆಯನ್ನು ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರ ಮುಂದೆಯೇ ಮನವಿ ಮಾಡಿಕೊಂಡ ಬಗ್ಗೆ ಕೇಳಿದಾಗ ಉತ್ತರಿಸಿದ ಸಚಿವ ಕೆ.ಎನ್.ರಾಜಣ್ಣ “ಸ್ವಾಮೀಜಿಗಳೆಲ್ಲಾ ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಹಾಗಿದ್ದರೆ ರಾಜ್ಯದಲ್ಲಿ ಏನೋ ಆಗಬಹುದಿತ್ತು. ಆದರೆ ಸಿಂಗ್ ಬದಲಾವಣೆ ವಿಚಾರ ಕೇವಲ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಬಿಟ್ಟ ತೀರ್ಮಾನ” ಎಂದು ಅಭಿಪ್ರಾಯಪಟ್ಟರು.