ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಡಿ ಅರೆಸ್ಟ್ ಆಗಿ ಎಸ್ಐಟಿ ವಶದಲ್ಲಿದ್ದಾರೆ. ಚುನಾವಣೆಗೆ ನಡೆದ ನಂತರ ಅವರ ಮೇಲೆ ಪ್ರಕರಣ ದಾಖಲಾಗಿದ್ದು, ಒಂದು ವೇಳೆ ಅವರು ಗೆದ್ದಿದ್ದರೆ ಈಗ ಏನಾಗುತ್ತಿತ್ತು ಅನ್ನೋ ಅನುಮಾನ ಕಾಡದೆ ಇರದು?
ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ನಿಂತು ಗೆಲುವು ಸಾಧಿಸಿದವರು ಇದ್ದಾರೆ. ಹೀಗಾಗಿ, ಆರೋಪಿ, ಅಪರಾಧಿ ಚುನಾವಣೆಗೆ ನಿಲ್ಲಬಾರದು ಅಂತೇನಿಲ್ಲ, ಆದರೆ, ಪ್ರಜ್ವಲ್ ಒಂದು ವೇಳೆ ಗೆದ್ದಿದ್ದರೆ, ಮತ್ತಾವ್ಯ ಸಂತ್ರಸ್ತೆ ಕೂಡ ದೂರು ಕೊಡಲು ಮುಂದೆ ಬರುತ್ತಿರಲಿಲ್ಲ.
ಹಾಸನದ ಮತದಾರರ ನೈತಿಕತೆ ಒಂದು ಹಂತಕ್ಕೆ ಪ್ರಶ್ನಾರ್ಥಕವಾಗುತ್ತಿತ್ತು. ಇಷ್ಟೆಲ್ಲ ಆರೋಪ ಕೇಳಿ ಬಂದಿದ್ದರೂ, ಇಷ್ಟೊಂದು ಹೆಣ್ಣುಮಕ್ಕಳ ಜೀವನ ಹಾಳಾಗಿದ್ದರು ಅವರನ್ನು ಗೆಲ್ಲಿಸಿದ್ದಾರಲ್ಲ ಎಂದು ಜನ ಆಡಿಕೊಂಡು ನಗುತ್ತಿದ್ದರು. ನೊಂದ ಹೆಣ್ಣುಮಕ್ಕಳು ಕೂಡ ಜನರೇ ಅವರ ಕಡೆಗಿದ್ದಾರೆ ನಮಗ್ಯಾಕೆ ಉಸಾಬರಿ, ಸುಮ್ಮನ್ನಿದ್ದು ಬಿಡೋಣ ಎನಿಸುತ್ತಿತ್ತು.
ಹಾಸನದಲ್ಲಿ ಒಂದು ವೇಳೆ ಪ್ರಜ್ವಲ್ ಗೆದ್ದಿದ್ದರೆ, ಆತನಿಗೆ ಮತ್ತೊಂದು ಕೊಂಬು ಬಂದಿರುತ್ತಿತ್ತು. ಏಕೆಂದರೆ, ಈಗಾಗಲೇ ಪ್ರಜ್ವಲ್ ತನಿಖೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಮಾತಿದೆ. ಎಸ್ಐಟಿ ಪೊಲೀಸರ ಪ್ರಶ್ನೆಗೆ ನನಗೇನೂ ಗೊತ್ತಿಲ್ಲ ಎಂದಷ್ಟೇ ಉತ್ತರ ನೀಡುತ್ತಿದ್ದಾರಂತೆ. ಈ ವರ್ತನೆ ಎಕ್ಸಿಟ್ ಫೋನ್ ಬಂದ ಮೇಲಂತೂ ಜಾಸ್ತಿಯಾಗಿತ್ತು, ನಾನು ಹೆಂಗಿದ್ರು ಗೆಲ್ತೀನಿ, ಆಮೇಲೆ ನೀವ್ ನನ್ನನ್ನು ಏನು ಮಾಡೋಕ್ ಆಗಲ್ಲ ಎಂಬಂತೆ ವರ್ತಿಸುತ್ತಿದ್ದರು ಎನ್ನಲಾಗಿದೆ.
ಪೊಲೀಸರು ಕೂಡ ಒಬ್ಬ ಜನಪ್ರತಿನಿಧಿಯ ಜತೆಗೆ ವರ್ತಿಸಬೇಕಾದ ಅನಿವಾರ್ಯತೆ ಯಲ್ಲಿ ಕೆಲಸ ಮಾಡಬೇಕಿತ್ತು. ಈಗ ಅವರು ಸಾಮಾನ್ಯ ಪ್ರಜೆ, ಒಬ್ಬ ಆರೋಪಿಯಷ್ಟೇ, ಈಗ ಅವರನ್ನು ತಮಗೆ ಬೇಕಾದಂತೆ ವಿಚಾರಣೆ ಒಳಪಡಿಸಬಹುದು, ಕಾನೂನು ವ್ಯಾಪ್ತಿಯಲ್ಲಿ. ಇದೊಂದು ಸಂದಿಗ್ಧ ಪರಿಸ್ಥಿತಿಯನ್ನು ಪೊಲೀಸರು ತಪ್ಪಿಸಿಕೊಂಡರು ಎನ್ನಬಹುದು.
ಕಾನೂನಾತ್ಮಕವಾಗಿ ಅವರು ಏನೇ ವಿಚಾರಣೆಗಳಿದ್ದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಾಗಿ ಬರುತ್ತಿತ್ತು, ಆಗ ಮರು ಚುನಾವಣೆ ನಡೆಯಬೇಕಿತ್ತು. ಈಗಾಗಲೇ ಪಕ್ಷ ಅವರನ್ನು ಅಮಾನತು ಮಾಡಿದೆ. ಆಗ ಪಕ್ಷ ಏನು ಕ್ರಮ ಕೈಗೊಳ್ಳುತ್ತಿತ್ತು ಎಂಬುದು ಕುತೂಹಲವಾಗಿರುತ್ತಿತ್ತು.
ಇನ್ನು ಮೈತ್ರಿಬಪಕ್ಷ ಬಿಜೆಪಿ ಕೂಡ ಮುಜುಗರ ಅನುಭವಿಸಬೇಕಾಗಿತ್ತು. ಲೋಕಸಭೆಯಲ್ಲಿ ಪ್ರಜ್ವಲ್ ಉಪಸ್ಥಿತಿ, ಜೆಡಿಎಸ್ ಮತ್ತು ಬಿಜೆಪಿಗೆ ನುಂಗಬಾರದ ತುತ್ತಾಗುತ್ತಿತ್ತು. ಯಾವುದಾದರೂ ವಿಷಯಕ್ಕೆ ಪ್ರಜ್ವಲ್ ಕಡೆಗೆ ಬರುತ್ತಿದ್ದ ಟೀಕಾಸ್ತ್ರ ಎದುರಿಸುವುದು ಅಷ್ಟು ಸುಲಭವಾಗುತ್ತಿರಲಿಲ್ಲ. ಹೀಗಾಗಿ, ಪ್ರಜ್ವಲ್ ಸೋಲು ಬಿಜೆಪಿಗೂ ನಿರಾಳ, ಹಾಗೆಯೇ ಜೆಡಿಎಸ್ ವರಿಷ್ಠರಿಗೂ ನಿರಾಳವಾಗಿದೆ.
ಒಟ್ಟಾರೆ, ಪ್ರಜ್ವಲ್ ಸೋಲು ಅವರ ಪಕ್ಷಕ್ಕೆ, ಕುಟುಂಬಕ್ಕೆ ಸೇರಿದಂತೆ ಕೆಲವರಿಗೆ ನಷ್ಟ ಎನಿಸಿದರೆ, ಅನೇಕರಿಗೆ ಸಮಾಧಾನ ತಂದಿದೆ. ಮುಂದೆ ಆಗಬಹುದಾಗಿದ್ದ ಅನೇಕ ತೊಂದರೆಗಳು, ಕಾಂಪ್ಲಿಕೇಷನ್ ಗಳಿಗೆ ಪ್ರಜ್ವಲ್ ಸೋಲು ಅಂತ್ಯವಾಡಿದೆ. ಹಾಸಮದ ಜನರಿಗೂ ಒಂದು ರೀತಿಯ ಹೆಮ್ಮೆ ಮೂಡಿಸಿದೆ. ತಪ್ಪು ಮಾಡಿದರೆ, ಹಾಸನದ ಜನತೆ ನೈತಿಕತೆ ಮೀರಿ ನಡೆದುಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ.

