ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅಧಿಕಾರವಧಿಯನ್ನು ಮೇ 21ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಅಲೋಕ್ ಮೋಹನ್ ಅವರ ಸೇವಾವಧಿ ಏಪ್ರಿಲ್ 30ಕ್ಕೆ (ಇಂದು) ಅಂತ್ಯವಾಗಬೇಕಿತ್ತು. ಆದರೆ ಮೂರು ತಿಂಗಳ ವಿಸ್ತರಣೆ ಕೋರಿ ಡಿಜಿಪಿ ಅವರು ಸಲ್ಲಿಸಿದ ಮನವಿಗೆ ಸ್ಪಂದಿಸಿರುವ ಸರ್ಕಾರವು 21 ದಿನಗಳ ಕಾಲವಷ್ಟೇ ವಿಸ್ತರಣೆ ಮಾಡಿದೆ.
ಈ ಮೂಲಕ ಹೊಸ ಡಿಸಿಪಿ ನೇಮಕಕ್ಕೆ ತಾತ್ಕಾಲಿಕವಾಗಿ ತೆರೆ ಎಳೆದಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಅಲೋಕ್ ಮೋಹನ್ ಅವರು 2023ರಲ್ಲಿ ಇಲಾಖೆಯ ಸಾರಥಿಯಾಗಿದ್ದರು. ಆರಂಭದ ಮೂರು ತಿಂಗಳ ಕಾಲ ಪ್ರಭಾರಿ ಡಿಜಿಪಿಯಾಗಿದ್ದು, ಬಳಿಕ ಅವರನ್ನು ಪೂರ್ಣ ಪ್ರಮಾಣದ ಡಿಜಿಪಿಯಾಗಿ ಸರ್ಕಾರ ನೇಮಿಸಿತ್ತು.
ರಾಜ್ಯದಲ್ಲಿ ಡಿಜಿ-ಐಜಿಪಿಯಾಗಿ ಕನಿಷ್ಠ ಕಾಲಾವಧಿ ಎರಡು ವರ್ಷ ಇರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಈ ಆದೇಶದಂತೆ ಮೂರು ತಿಂಗಳ ಕಾಲ ಡಿಜಿಪಿಯಾಗಿ ವಿಸ್ತರಿಸಬೇಕೆಂದು ಕೋರಿ ಕೇಂದ್ರ ಗೃಹ ಇಲಾಖೆಗೆ ಅಲೋಕ್ ಮೋಹನ್ ಅವರು ಅರ್ಜಿ ಸಲ್ಲಿಸಿದ್ದರು.