ಅಪರಾಧ ಸುದ್ದಿ

ಬಳ್ಳಾರಿಯಲ್ಲಿ ಗ್ಯಾಸ್ ಸಿಲಿಂಡರ್ ಅಕ್ರಮ ಮಾರಾಟ: ಓರ್ವನ ಬಂಧನ, 9 ಎಲ್​ಪಿಜಿ ಸಿಲಿಂಡರ್ ವಶಕ್ಕೆ

Share It

ಬಳ್ಳಾರಿ: ನಗರದ ಹೊರ ವಲಯದಲ್ಲಿ ಅಕ್ರಮವಾಗಿ ಅಡುಗೆ ಅನಿಲ(LPG) ಸಿಲಿಂಡರ್‌ ಸಂಗ್ರಹಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ, 9 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ ಎಲ್​ಪಿಜಿ ಸಮಸ್ಯೆ ಹಲವೆಡೆ ಉಲ್ಬಣಿಸಿದೆ. ಅಡುಗೆ ಅನಿಲ ಸಿಲಿಂಡರ್ ಕೊರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ದುರ್ಲಾಭ ಪಡೆಯಲು ಕೆಲವರು ಅಡ್ಡದಾರಿ ಹಿಡಿದಿದ್ದಾರೆ. ಎಲ್​ಪಿಜಿ ಸಿಲಿಂಡರ್‌ಗಳನ್ನು ಸಂಗ್ರಹಿಸಿ, ಕಾಳ ಸಂತೆಯಲ್ಲಿ ಹೆಚ್ಚಿನ ದರಕ್ಕೆ ಸಿಲಿಂಡರ್ ಮಾರಾಟ ಮಾಡುವ ಬಗ್ಗೆ ಮಾಹಿತಿ ಪಡೆದ ಬಳ್ಳಾರಿ ಗ್ರಾಮೀಣ ಪೊಲೀಸರು, ಆಹಾರ ಇಲಾಖೆಯ ಅಧಿಕಾರಿಗಳ ಜತೆಯಲ್ಲಿ ಬಳ್ಳಾರಿಯ ಗೌತಮ ನಗರದಲ್ಲಿ ಸೋಮವಾರ ಮಿಂಚಿನ ಕಾರ್ಯಾಚರಣೆ ನಡೆಸಿ 9 ಸಿಲಿಂಡರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಆಟೋ ಮೂಲಕ ಅಕ್ರಮವಾಗಿ ಎಲ್‌ಪಿಜಿ ಸಿಲಿಂಡರ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ, ಗ್ರಾಮೀಣ ಪೊಲೀಸರು, ಅಕ್ರಮವಾಗಿ ಸಿಲಿಂಡರ್ ಮಾರಾಟ ಮಾಡುತ್ತಿದ್ದ ಗನಮೂರ್ತಿ ಎಂಬುರನ್ನು ಬಂಧಿಸಿ, ಆತನ ಬಳಿ ಇದ್ದ, 5 ವಾಣಿಜ್ಯ ಬಳಕೆಯ (ಕಮರ್ಷಿಯಲ್) ಗ್ಯಾಸ್ ಸಿಲಿಂಡರ್‌ಗಳನ್ನು ಹಾಗೂ 4 ಗೃಹ ಬಳಕೆಯ (ಡೊಮೆಸ್ಟಿಕ್) ಗ್ಯಾಸ್ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಎಸ್.ಪಿ. ಮಾಹಿತಿ ನೀಡಿದರು.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಮಗೆ ಅರ್ಜೆಂಟ್ ಆಗಿ ಅಡುಗೆ ಅನಿಲ ಸಿಲಿಂಡರ್ ಬೇಕಾಗಿದೆ ಎಂದು ಗ್ರಾಹಕರ ರೂಪದಲ್ಲಿ ಬೇಡಿಕೆ ಇಟ್ಟು ಕಾರ್ಯಾಚರಣೆ ನಡೆಸಿ, ಆರೋಪಿ ಮೂರ್ತಿಯನ್ನು ಟ್ರ‍್ಯಾಪ್ ಮಾಡಿದ್ದಾರೆ. ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ, ದಾಖಲಾಗಿದ್ದು, ಗ್ರಾಮೀಣ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಗ್ರಾಮೀಣ ಪಿಐ ಉದಯರವಿ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ತನಿಖೆ ಮುಂದುವರೆದಿದೆ.


Share It

You cannot copy content of this page