ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನ ಉದ್ಘಾಟಿಸಿದ ನಂತರ ಮಾತನಾಡಿದರು. ಪೋಲೀಸ್ ಇಲಾಖೆ ಕೆಲವು ಠಾಣೆಗಳಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಇನ್ನು ಕೆಲವೆಡೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸುಮಾರು 88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲಾಗಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿರುವುದು ಅಕ್ಷಮ್ಯ ಅಪರಾಧ. ರಾಜ್ಯ ಸರ್ಕಾರ ಮಾತ್ರವಲ್ಲದೆ, ಪೋಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವಂಥ ಕೆಲಸವಿದು ಎಂದರು.
2003 ರಿಂದ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆ ದೇಶದಲ್ಲಿಯೇ ಉತ್ತಮ ಪೋಲೀಸ್ ಠಾಣೆಗಳ ಸಾಲಿನಲ್ಲಿ ಮೂರನೇ ಸ್ಥಾನ ಪಡೆದಿದೆ ಎಂದರು.
ಪೊಲೀಸರು ಜಾಗರೂಕತೆಯಿಂದ ಕೆಲಸ ಮಾಡಬೇಕು: ಪೋಲೀಸ್ ಸಬ್ ಇನ್ಸ್ಪೆಕ್ಟರ್, ಎ ಎಸ್ ಪಿ, ಡಿ ವೈ ಎಸ್ ಪಿ , ಎಸಿಪಿ ಇವರಿಗೆ ಗೊತ್ತಿಲ್ಲದೆ ಯಾವ ಅಪರಾಧವೂ ನಡೆಯಲು ಸಾಧ್ಯವಿಲ್ಲ. ಪೊಲೀಸರು ಜಾಗರೂಕತೆಯಿಂದ ಕೆಲಸ ಮಾಡಬೇಕೆಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ವಿಶೇಷವಾಗಿ ದುರ್ಬಲರಿಗೆ ರಕ್ಷಣೆ ನೀಡಬೇಕು. ಬಲಾಢ್ಯರ ಕೈಗೊಂಬೆಗಳಂತೆ ಕೆಲಸ ಮಾಡಬಾರದು ಎಂದು ಸೂಚಿಸಲಾಗಿದೆ ಎಂದರು.
ಪೊಲೀಸರು ಜಾಗರೂಕತೆಯಿಂದ, ದಕ್ಷತೆಯಿಂದ ಕೆಲಸ ಮಾಡಿದರೆ ರಾಜ್ಯವನ್ನು ಮಾದಕ ವಸ್ತು ಮುಕ್ತ ವನ್ನಾಗಿಸಬಹುದು. ಕಳ್ಳತನ, ಸುಲಿಗೆ, ದರೋಡೆ, ಕೊಲೆ ಮುಂತಾದ ಪ್ರಕರಣ ಕಡಿಮೆಯಾಗುತ್ತಿದ್ದರೂ, ಸೈಬರ್ ಅಪರಾಧ ಹಾಗೂ ಡ್ರಗ್ಸ್ ಅಪರಾಧ ಕಡಿಮೆಯಾಗುತ್ತಿಲ್ಲ. ಯುವಜನರು ಇದರಿಂದ ಹಾಳಾಗುತ್ತಿದ್ದು, ಕರ್ನಾಟಕವನ್ನು ಮಾದಕ ವಸ್ತು ಮುಕ್ತಾ ರಾಜ್ಯವಾಗಿಸಬೇಕೆಂದು ಸರ್ಕಾರ ಘೋಷಣೆ ಮಾಡಿದೆ. ಪೊಲೀಸರು ದಕ್ಷತೆಯಿಂದ ಕೆಲಸ ಮಾಡಿದರೆ ರಾಜ್ಯವನ್ನು ಮಾದಕ ವಸ್ತು ಮುಕ್ತವನ್ನಾಗಿಸಬಹುದು ಎಂದರು.

