ಕೆ.ಆರ್ ಪುರ: ನವಜಾತ ಶಿಶುಗಳಿಗೆ ಓವಂ ಆಸ್ಪತ್ರೆ ವರದಾನವಾಗಿದೆ ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದರು.
ಕೆಆರ್ ಪುರದ ಭಟ್ಟರಹಳ್ಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನೂತನ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ಕೆ.ಆರ್. ಪುರ ಸುತ್ತಮುತ್ತ ನವಜಾತ ಶಿಶುಗಳ ಆರೈಕೆಗೆ ಸರಿಯಾದ ಆಸ್ಪತ್ರೆ ಇರಲಿಲ್ಲ ಇದೀಗ ಓವಂ ಆಸ್ಪತ್ರೆ ತನ್ನ ಶಾಖೆಯನ್ನು ತೆರೆಯುವ ಮೂಲಕ ನವಜಾತ ಶಿಶುಗಳ ವರದಾನವಾಗಿ ಹೊರಹೊಮ್ಮುತ್ತಿದೆ ಎಂದರು.
ಕೆ.ಆರ್. ಪುರ ಸುತ್ತಮುತ್ತ ಇರುವವರು ಈ ಆಸ್ಪತ್ರೆ ಸೌಲಭ್ಯ ಸದುಪಯೋಗಪಡೆಸಿಕೊಳ್ಳಬೇಕು, ಆಸ್ಪತ್ರೆಗೆ ಬರುವ ಬಡವರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡಬೇಕು. ಹೊಸದಾಗಿ ಪ್ರಪಂಚ ನೋಡುವ ಶಿಶುಗಳಿಗೆ ಈ ಆಸ್ಪತ್ರೆ ದೇವಾಲಯವಾಗಿ ನಿರ್ಮಾಣವಾಗಲಿದೆ. ಉತ್ತಮ ರೀತಿಯಲ್ಲಿ ಓವಂ ಆಸ್ಪತ್ರೆ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.
ಓವಂ ಆಸ್ಪತ್ರೆ ಅಧ್ಯಕ್ಷ ಡಾ. ಆದರ್ಶ ಸೋಮಶೇಖರ್, ಮಾತನಾಡಿ, ನವಜಾತ ಶಿಶುಗಳ ಹೆಚ್ಚಿನ ಆರೈಕೆಗಾಗಿ ಇನ್ನಷ್ಟು ಹೆಚ್ಚಿನ ಸೌಲಭ್ಯದೊಂದಿಗೆ ನೂತನ ಬ್ರಾಂಚ್ (ಆಸ್ಪತ್ರೆ) ಆರಂಭಿಸಿದ್ದೇವೆ. ತಾಯಿ ಮತ್ತು ಮಗುವಿನ ಹಾರೈಕೆಯಲ್ಲಿ ಮುಂಚೂಣಿ ಓವಂ ಆಸ್ಪತ್ರೆ ಕಳೆದ 5 ವರ್ಷಗಳಲ್ಲಿ 15000ಕ್ಕೂ ಹೆಚ್ಚು ನವಜಾತ ಶಿಶುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಿ ಶೇ. 99 ರಷ್ಟು ಬದುಕುಳಿಯುವಿಕೆ ಉನ್ನತ ಅಂಕಿ-ಅಂಶಗಳಿಂದ ದೇಶದಲ್ಲೇ ತನ್ನನ್ನು ಗುರುತಿಸಿಕೊಂಡಿದೆ ಎಂದು ಹೇಳಿದರು.
ಕಡಿಮೆ ತೂಕವಿರುವ, ಬೇಗ ಹುಟ್ಟಿರುವ, ಉಸಿರಾಟದ ಸಮಸ್ಯೆ ಇರುವ ಹಾಗೂ ಸೋಂಕಿನಿಂದ ಬಳಲುತ್ತಿರುವ ಮಕ್ಕಳಿಗೆ ಉತ್ತಮ ಚಿಕಿತ್ಸೆ ಅವಶ್ಯಕತೆ ಇರುತ್ತದೆ. ಇಲ್ಲಿ ಕೇವಲ 540 ಗ್ರಾಂ ತೂಕವಿರುವ ಮಗುವಿನಿಂದ ಹಿಡಿದು 6 ತಿಂಗಳಿಗೆ ಹುಟ್ಟಿರುವ ಮಕ್ಕಳನ್ನು ಬದುಕಿಸಿ ತಂದೆ-ತಾಯಿಯರ ಬದುಕಿನಲ್ಲಿ ಹೊಸದೊಂದು ಬೆಳಕು ತರಲಾಗಿದೆ ಎಂದು ಹೇಳಿದರು.
2014ರಲ್ಲಿ ಬಾಣಸವಾಡಿಯಲ್ಲಿ 4 ವೈದ್ಯರಿಂದ ಪ್ರಾರಂಭವಾದ ಈ ಆಸ್ಪತ್ರೆ ಪ್ರಸ್ತುತ ಬೆಂಗಳೂರಿನ ಉತ್ತರ (1 ಕ್ಲಿನಿಕ್ ) ದಕ್ಷಿಣ (1 ಆಸ್ಪತ್ರೆ), ಪೂರ್ವ (1 ಕ್ಲಿನಿಕ್ ಮತ್ತು 1 ಆಸ್ಪತ್ರೆ) ಭಾಗಗಳಲ್ಲಿ ಮತ್ತು ಬೆಂಗಳೂರು ಗ್ರಾಮಾಂತರ-ಹೊಸಕೋಟೆ (1 ಆಸ್ಪತ್ರೆ)ಗಳಲ್ಲಿ ಉತ್ತಮ ಗುಣಮಟ್ಟದ ಸೇವೆ ನೀಡುವುದರ ಜೊತೆಗೆ ಇಲ್ಲಿನ ಹೆರಿಗೆ ವಿಭಾಗ ನೋವು ರಹಿತ ಹೆರಿಗೆ ಆಯ್ಕೆಗಳೊಂದಿಗೆ ನಾರ್ಮಲ್ ಹೆರಿಗೆ ಯಶಸ್ವಿಯಾಗಿ ಮಾಡಿಸಿದ್ದಾರೆ ಎಂದು ಹೇಳಿದರು.
ಪರಿಣಿತ ಪ್ರಸೂತಿ ತಜ್ಞರ ಅತ್ಯುತ್ತಮ ಸೇವೆಯಿಂದ ಈ ಆಸ್ಪತ್ರೆ ಗರ್ಭಧಾರಣೆ ಮತ್ತು ಹೆರಿಗೆ ಸೇವೆಗಳಿಗೆ ಪ್ರತಿಯೊಬ್ಬರ ಆಯ್ಕೆಯಾಗಿದೆ. ಹೆರಿಗೆ ವಿಭಾಗವು ಐವಿಎಫ್ ಸೇವೆ ಮುಂತಾದ ಸೌಲಭ್ಯ ಹೊಂದಿದೆ. ಈ ಆಸ್ಪತ್ರೆ ಕೈಗೆಟಕುವ ಬೆಲೆಯಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದೆ ಎಂದರು.
ಮಕ್ಕಳ ಶಸ್ತ್ರಚಿಕಿತ್ಸೆ ಲಭ್ಯತೆ ಇದ್ದು 1.5 ಕೆಜಿಯಷ್ಟು ಚಿಕ್ಕಮಗುವಿಗೆ ಶಸ್ತ್ರಚಿಕಿತ್ಸೆ, 15000 ಹೆರಿಗೆ ಮಾಡಿಸಿದ ಗರಿಮೆ ಈ ಆಸ್ಪತ್ರೆಯದ್ದಾಗಿದೆ. ಪ್ರಸ್ತುತ ಪೀಡಿಯಾಟ್ರಿಕ್ ಎಂಡೋಕ್ರೈನಾಲಜಿ, ಪೀಡಿಯಾಟ್ರಿಕ್ ಐಸಿಯು ಮತ್ತು ಅಲರ್ಜಿ ತಜ್ಞರ ಸೌಲಭ್ಯ ಹೊಂದಿದ್ದು ನವಜಾತ ಶಿಶುಗಳ ಬದುಕಿಗೆ ಇದು ಆಶಾಕಿರಣ. ಆಸ್ಪತ್ರೆಯಲ್ಲಿ ದೇಶದ ಅತ್ಯುನ್ನತ ಆಸ್ಪತ್ರೆಯಲ್ಲಿ ಶಿಕ್ಷಣ ಪಡೆದ ವೈದ್ಯರ ತಂಡವಿದೆ. ಈ ಆಸ್ಪತ್ರೆ ಸೌಲಭ್ಯ ಸದುಪಯೋಗಪಡೆಸಿಕೊಳ್ಳುವ ಮೂಲಕ ಮಕ್ಕಳ ಜೀವನ ಆರೋಗ್ಯಕರವಾಗಿರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಮೆಡಿಕಲ್ ಡೈರೆಕ್ಟರ್ ಡಾ.ವೇಣುಗೋಪಾಲ್, ಕ್ಲಿನಿಕಲ್ ಡೈರೆಕ್ಟರ್ ಮುರುಳಿ ಮೋಹನ್, ಪಾಲಿಕೆ ನಾಮನಿರ್ದೇಶಿತ ಮಾಜಿ ಸದಸ್ಯ ಆಂತೋಣಿಸ್ವಾಮಿ, ಭಟ್ಟರಹಳ್ಳಿ ಮಂಜು ಮತ್ತಿತರರಿದ್ದರು.