ಸುದ್ದಿ

ಸುಂಕಲಮ್ಮ ದೇವರಿಗೆ ನಿರ್ಮಿಸಲಾದ ನೂತನ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮ.

Share It

ದೇವನಹಳ್ಳಿ: ಸುಂಕಲಮ್ಮ ದೇವರಿಗೆ ನೂತನ ದೇವಾಲಯ ನಿರ್ಮಿಸುವ ಬಗ್ಗೆ ಮಿಸಗಾನಹಳ್ಳಿ ಗ್ರಾಮಸ್ಥರ ಸುಮಾರು 20 ವರ್ಷಗಳ ಕನಸು ಇಂದು ನನಸಾಗಿದೆ ಈ ಮೂಲಕ ಗ್ರಾಮದಲ್ಲಿ ಎಲ್ಲರೂ ಸುಖ, ಶಾಂತಿ, ನೆಮ್ಮದಿಯಿಂದ ಬಾಳಲು ಕಾಲ ಕಾಲಕ್ಕೆ ಮಳೆ ಬೆಳೆ ಉತ್ತಮವಾಗಿ ಜನ ಜಾನುವಾರುಗಳು ಸೇರಿದಂತೆ ಸಕಲ ಜೀವರಾಶಿಗಳಿಗೂ ಒಳಿತಾಗಲು ಭಕ್ತಿ ಭಾವದಿಂದ ಗ್ರಾಮಸ್ಥರೆಲ್ಲರು ಒಗ್ಗೂಡಿ ಸುಂಕಲಮ್ಮ ದೇವರಿಗೆ ನೂತನ ದೇವಾಲಯ ನಿರ್ಮಾಣ ಮಾಡಿ ಪ್ರತಿಷ್ಠಾಪನಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ಉಂಟುಮಾಡಿದೆ, ಎಂದು ಕಾರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ತಿಳಿಸಿದರು.

ತಾಲೂಕಿನ ಕಾರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀಸಗಾನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ದೇವಾಲಯದಲ್ಲಿ ಸುಂಕಲಮ್ಮ ದೇವಿಯ ಪ್ರತಿಷ್ಠಾಪನೆ ಹಾಗೂ ಗ್ರಾಮದಲ್ಲಿನ ಶ್ರೀ ರಂಗನಾಥಸ್ವಾಮಿ ದೇವರಿಗೆ 2.45 ಕೆಜಿ ತೂಕದ ಬೆಳ್ಳಿ ಕವಚ ತೊಡಿಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಗುರುವಾರ ಭಾಗವಹಿಸಿ ಅವರು ಮಾತನಾಡಿದರು.

ಸುಂಕಲಮ್ಮ ದೇವಾಲಯದ ಪ್ರತಿಸ್ಥಾಪನಾ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದ್ದು ಕಳಶಾರೋಹಣ, ಪ್ರಥಮ ಕುಂಭಾಭಿಷೇಕ, ಗಂಗೆಯನ್ನು ಹೊತ್ತು ತಂದ ಸುಮಂಗಳಿಯರಿಂದ ಕಳಸ ಪೂಜೆ, ದೇವಾಲಯದಲ್ಲಿ ಕಳಸ, ಹೋಮ, ಹವನ, ಮತ್ತಿತರ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ಪುರೋಯಿತರಾದ ದೇವಿ ಪ್ರಸಾದರೊಂದಿಗೆ ಭಕ್ತರ ಇಷ್ಟಾರ್ಥದಂತೆ ನಡೆದಿದೆ, ದೇವರುಗಳ ಆರಾಧನೆಯಿಂದ ನಮ್ಮ ಮನಸ್ಸುಗಳು ಒಳ್ಳೆಯದನ್ನು ಚಿಂತಿಸುವಂತಾಗಿ ಧರ್ಮ ಮಾರ್ಗದಲ್ಲಿ ನಡೆಯಲು ಪ್ರೇರೆಪಿಸುತ್ತದೆ, ದೇವಸ್ಥಾನಗಳನ್ನು ನಿರ್ಮಾಣ ಮಾಡಿದರೆ ಸಾಲದು ನಿತ್ಯ, ಪೂಜೆ, ಪುನಸ್ಕಾರಗಳು ನಿರಂತವಾಗಿ ನಡೆಯಬೇಕು, ಎಂದು ತಿಳಿಸಿದರು.

ಕಾರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್ ಮಾತನಾಡಿ, ಕಲೆ, ಸಾಹಿತ್ಯ, ಸಂಸ್ಕೃತಿಯ ಜೊತೆಗೆ ಧಾರ್ಮಿಕ ಭಕ್ತಿ, ಶ್ರದ್ದೆ, ಸೇವೆಗಾಗಿ ವಿವಿಧ ಸ್ತರಗಳಲ್ಲಿ ಏಕತೆಯನ್ನು ಕಂಡಂತಹ ನಾಡು ನಮ್ಮದು ಈ ನಿಟ್ಟಿನಲ್ಲಿ ಮೀಸಗಾನಹಳ್ಳಿಯಲ್ಲಿ ಅನಾದಿ ಕಾಲದಿಂದಲೂ ಸುಂಕಲಮ್ಮ ದೇವರನ್ನು ಗ್ರಾಮಸ್ಥರೆಲ್ಲರು ಭಕ್ತಿ ಭಾವದಿಂದ ಪೂಜಿಸುತ್ತಾ ಬಂದಿದ್ದೇವೆ. ದೇವರ ಸನ್ನಿಧಾನದಲ್ಲಿ ಬೇಡಿಕೊಂಡದ್ದನ್ನು ದಯಪಾಲಿಸುವ ಪವಾಡಗಳು ರಂಗನಾಥಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯದಲ್ಲಿ ಯಾವ ರೀತಿ ಹುತ್ತ ದಿಂದ ಕೂಡಿದೆಯೋ ಅದೇ ಮಾದರಿಯಲ್ಲಿಯೇ ನಮ್ಮೂರಿನ ರಂಗನಾಥಸ್ವಾಮಿ ನೆಲೆಸಿದೆ ಎಂದುತಿಳಿಸಿದರು.

ಕಾರಹಳ್ಳಿ ಪಂಚಾಯಿತಿ ಸದಸ್ಯೆ ಮೀಸಗಾನಹಳ್ಳಿ ಮಮತಾವೆಂಕಟೇಶ್ ಮಾತನಾಡಿ, ದೇವಸ್ಥಾನದ ಕಟ್ಟೆ ಈ ಹಿಂದೆ ಪಂಚಾಯಿತಿ ಕಟ್ಟೆ ಆಗಿತ್ತು. ಗ್ರಾಮದ ವ್ಯಾಜ್ಯಗಳ ಬಗೆಗಿನ ನ್ಯಾಯ ಪಂಚಾಯಿತಿಗಳು ಇಲ್ಲಿ ನಡೆಯುತ್ತಿತ್ತು ಅಂತಹ ಸಂದರ್ಭದಲ್ಲಿ ಸುಳ್ಳು ಹೇಳಿ ಮತ್ತೊಬ್ಬರಿಗೆ ಅನ್ಯಾಯ ಮಾಡಿದವರ ಮೇಲೆ ಭಗವಂತ ಕಷ್ಟಗಳನ್ನು ಕೊಟ್ಟ ಅನೇಕ ಉದಾಹರಣೆಗಳಿವೆ. ಸುಂಕಲಮ್ಮ ದೇವಸ್ಥಾನದ ನಿರ್ಮಾಣ ಕಾರ್ಯ ಹಲವು ವರ್ಷಗಳ ಕಾಲ ನನೆಗುದಿಯಲ್ಲಿತ್ತು ಶ್ರೀ ಆಂಜನೇಯ ಸ್ವಾಮಿ ಎಂಟರ್ ಪ್ರೈಸಸ್ ಮಾಲೀಕರು ಸುಮಾರು 20 ಲಕ್ಷರೂ ವೆಚ್ಚದಲ್ಲಿ ಅತ್ಯದ್ಭುತವಾಗಿ ದೇವಸ್ಥಾನ ನಿರ್ಮಿಸಿ ಕೊಟ್ಟಿದ್ದಾರೆ ಅವರು ಮತ್ತು ಅವರ ಕುಟುಂಬಕ್ಕೆ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ, ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಓಬದೇನಹಳ್ಳಿ ಮುನಿಯಪ್ಪ, ಬಿದಲೂರು ಸೊಸೈಟಿ ಅಧ್ಯಕ್ಷ ಯಂಬ್ರಹಳ್ಳಿ ರಮೇಶ್, ಉಪಾಧ್ಯಕ್ಷ ಮುನಿಕೃಷ್ಣಪ್ಪ, ಕಾರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಸದಸ್ಯರಾದ ಚಂದ್ರಶೇಕರ್, ಮಮತಾವೆಂಕಟೇಶ್, ಕೇಶವಮೂರ್ತಿ, ಮಾಜಿ ಸದಸ್ಯ ಶಂಕರ್, ಅರ್ಚಕರಾದ ರಮೇಶ್, ಸುತ್ತ-ಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.


Share It

You cannot copy content of this page