ರಾಜಕೀಯ ಸುದ್ದಿ

ಇಂಡಿಯಾ ಮೈತ್ರಿ ಕೂಟದ ಸಭೆ: ಎನ್‌ಡಿಎ ಸಭೆ ಮೇಲೆ ಸಭೆ

Share It

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಬರದಿರುವ ಕಾರಣದಿಂದ ಇದೀಗ ದೆಹಲಿಯ ರಾಜಕೀಯ ಅಂಗಳದಲ್ಲಿ ಚಟುವಟಿಕೆಗಳು ಗರಿಗೆದರಿವೆ.

ಇಂಡಿಯಾ ಮೈತ್ರಿಕೂಟ ನಿರೀಕ್ಷೆಗೆ ಮೀರಿದ ಯಶಸ್ಸು ಸಾಧಿಸಿದ ಹಿನ್ನೆಲೆಯಲ್ಲಿ ಆ ಪಕ್ಷದ ನಾಯಕರಲ್ಲಿ ವಿಶ್ವಾಸ ಹೆಚ್ಚಾಗಿದೆ. ಒಂದು ಹೆಜ್ಜೆ ಮುಂದೆಯಿಟ್ಟರೆ, ಅಧಿಕಾರದ ಚುಕ್ಕಾಣಿ ಸಿಗುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಸಮಾನ ಮನಸ್ಕ ಸಣ್ಣ ಸಣ್ಣ ಪಕ್ಷಗಳನ್ನು ಸೆಳೆಯುವ ಪ್ರಯತ್ನದಲ್ಲಿ ಇಂಡಿಯಾ ಒಕ್ಕೂಟ ಮತ್ತು ಎನ್‌ಡಿಎ ಒಕ್ಕೂಟಗಳೆರೆಡು ಸಜ್ಜಾಗಿವೆ.

ಪ್ರಸ್ತುತ ಬಿಹಾರದ ನಿತೀಶ್ ಕುಮಾರ್ ಮತ್ತು ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ಅವರಿಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಈ ಇಬ್ಬರು ನಾಯಕರನ್ನು ಸೆಳೆಯಲು ಇಂಡಿಯಾ ಮತ್ತು ಎಸ್‌ಡಿಎ ಪ್ರಯತ್ನ ನಡೆಸುತ್ತಿವೆ. ಈ ಇಬ್ಬರು ನಾಯಕರು ಈಗಾಗಲೇ ಎನ್‌ಡಿಎ ಒಕ್ಕೂಟದಲ್ಲಿದ್ದು, ಅವರನ್ನು ಇಂಡಿಯಾ ಕಡೆಗೆ ಸೆಳೆಯುವ ಪ್ರಯತ್ನವಂತೂ ನಡೆದಿದೆ.

ಈ ನಿಟ್ಟಿನಲ್ಲಿ ಇಂಡಿಯಾ ಒಕ್ಕೂಟ ಇಂದು ಸಂಜೆ ಸಭೆ ಕರೆದಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ, ತೇಜಸ್ವಿ ಯಾದವ್, ಶರದ್ ಪವಾರ್, ಅಖಿಲೇಶ್ ಯಾದವ್, ಎಂ.ಕೆ.ಸ್ಟಾಲಿನ್ ಸೇರಿದಂತೆ ವಿವಿಧ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.

ಎನ್‌ಡಿಎಯಿಂದಲೂ ಕರೆ: ಈ ನಡುವೆ ಬಿಜೆಪಿಗೂ ಕೂಡ ಅಧಿಕಾರ ಹಿಡಿಯುವಷ್ಟು ಸ್ಥಾನ ಸಿಕ್ಕಿಲ್ಲವಾದ ಕಾರಣ, ಎನ್‌ಡಿಎ ಮೈತ್ರಿ ಕೂಟ ಮಿತ್ರಪಕ್ಷಗಳನ್ನು ಸೆಳೆಯುವ ಪ್ರಯತ್ನ ನಡೆಸಿದೆ. ಹೀಗಾಗಿ, ಇಂದು ಸಂಜೆ ೪ ಗಂಟೆಗೆ ಸಭೆ ಕರೆಯಲಾಗಿದೆ. ಸಭೆಯಲ್ಲಿ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ಜನಸೇನಾ ನಾಯಕ ಪವನ್ ಕಲ್ಯಾಣ್ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ.

ಒಟ್ಟಾರೆ, ಕೇಂದ್ರ ಸರಕಾರ ರಚನೆಗೆ ಸರಳ ಬಹುಮತ ನೀಡದ ಭಾರತದ ಮತದಾರ, ಅದಕ್ಕಾಗಿ ಉಭಯ ಬಣಗಳ ನಾಯಕರು ಸರ್ಕಸ್ ನಡೆಸುವಂತೆ ಮಾಡಿದ್ದಾನೆ. ಇದೀಗ ಎನ್‌ಡಿಎ ನೇತೃತ್ವದಲ್ಲಿ ಮೂರನೇ ಬಾರಿ ಕೇಂದ್ರ ಸರಕಾರ ಅಧಿಕಾರಕ್ಕೆ ಬರುತ್ತದೆಯಾ ಅಥವಾ ಇಂಡಿಯಾ ಒಕ್ಕೂಟ ಏನಾದರೂ ತಂತ್ರಗಾರಿಕೆ ನಡೆಸಿ, ಅಧಿಕಾರಕ್ಕೆ ಬರುವ ಪ್ರಯುತ್ನ ನಡೆಸುತ್ತದೆಯಾ ಕಾದು ನೋಡಬೇಕಿದೆ.


Share It

You cannot copy content of this page