ಹರಾರೆ (ಜಿಂಬಾಂಬೆ) : ಬುಧವಾರ ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಐದು ಟಿ 20 ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಜಿಂಬಾಂಬೆ ವಿರುದ್ಧ 23 ರನ್ ಗಳಿಂದ ಭರ್ಜರಿ ಜಯಗಳಿಸಿತು. ಕಳೆದ ಪಂದ್ಯದಲ್ಲಿ ಭಾರತ ಬರೋಬ್ಬರಿ 100 ರನ್ ಗಳ ಅಂತರದಿಂದ ಗೆದ್ದು ಬೀಗಿತ್ತು. ಅದೇ ರೀತಿ ಮೂರನೇ ಪಂದ್ಯದಲ್ಲೂ ಸಹ ಗೆಲ್ಲುವ ಮೂಲಕ ಸರಣಿಯಲ್ಲಿ ಮೇಲುಗೈ ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ ತನ್ನ ಹನ್ನೊಂದರ ಬಳಗದಲ್ಲಿ ರಿಯಾನ್ ಪರಾಗ್, ಸಾಯಿ ಸುದರ್ಶನ್, ಮುಕೇಶ್ ಕುಮಾರ್, ದೃವ್ ಜೂರೆಲ್, ಬದಲಿಗೆ ವಿಶ್ವ ಕಪ್ ಮುಗಿಸಿಕೊಂಡು ಬಂದ ಯಶಸ್ವಿ ಜೈಸ್ವಾಲ್,ಶಿವಂ ದುಬೆ, ಸಂಜು ಸ್ಯಾಮ್ಸನ್, ಖಲೀಲ್ ಅಹಮದ್ ಗೆ ಸ್ಥಾನ ನೀಡಿತು.
ಆರಂಭಿಕ ಆಟಗಾರರಾಗಿ ಬಂದ ನಾಯಕ ಶುಭ್ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಜೊತೆಯಾಟ ಆಡಿದರು. ನಂತರ ಜೈಸ್ವಾಲ್ 36 ರನ್ ಗಳಿಸಿ ವಿಕೆಟ್ ಒಪ್ಪಿಸಿದರು . ನಾಯಕ ಶುಭ್ಮನ್ ಗಿಲ್ 49 ಬಾಲ್ ಗಳಲ್ಲಿ 3 ಸಿಕ್ಸರ್ 7 ಬೌಂಡರಿ ಸಹಿತ 66 ರನ್ ಚಚ್ಚಿದರು. ನಂತರ ಕಣಕ್ಕಿಳಿದ ರುತುರಾಜ್ ಗಾಯಕ್ವಡ್ 28 ಬಾಲ್ ಗಳಲ್ಲಿ 3 ಸಿಕ್ಸರ್ 4 ಬೌಂಡರಿ ಸೇರಿ 49 ರನ್ ಗಳಿಸಿ ಅರ್ಧ ಶತಕ ವಂಚಿತರಾದರು. ಕೊನೆಯಲ್ಲಿ ಟೀಮ್ ಇಂಡಿಯಾ 20 ಓವರ್ ಗಳ ಹಂತಕ್ಕೆ 4 ವಿಕೆಟ್ ಕಳೆದುಕೊಂಡು 184 ರನ್ ಗಳ ಗುರಿಯನ್ನು ನೀಡಿತು.
ಇನ್ನೂ ಎರಡನೇ ಇನ್ನಿಂಗ್ಸ್ ಆರಂಭದಲ್ಲಿಯೇ ಅವೀಶ್ ಖಾನ್ ಜಿಂಬಾಂಬೆಯ ಆರಂಭಿಕ ಆಟಗಾರನನ್ನು ಔಟ್ ಮಾಡಿ ಆಘಾತ ನೀಡಿದರು. ಜಿಂಬಾಂಬೆಯ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಡಾಯಿನ್ ಮೇಯರ್ಸ್ ಅವರ 65 ರನ್ ಗಳ ಏಕಾಂಗಿ ಹೋರಾಟ ಬಿಟ್ಟರೆ ಇನ್ನು ಯಾವ ಆಟಗಾರರೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.
ಭಾರತದ ಪರ ಬೌಲ್ ಮಾಡಿದ ವಾಷಿಂಗ್ಟನ್ ಸುಂದರ್ 3 ವಿಕೆಟ್ ಮತ್ತು ಅವೇಶ್ ಖಾನ್ 2 ವಿಕೆಟ್ ಪಡೆದರು.ನಂತರ ಜಿಂಬಾಂಬೆ 184 ರನ್ ಗಳನ್ನು ಬೆನ್ನತ್ತಲು ವಿಫಲರಾದರು. ಕೊನೆಗೆ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿ 23 ರನ್ ಗಳ ಸೋಲನ್ನು ಅನುಭವಿಸಿದರು. ಟೀಮ್ ಇಂಡಿಯಾ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-2 ರ ಅಂತರದಲ್ಲಿ ಮೇಲುಗೈ ಸಾಧಿಸಿದೆ.