ಹರಾರೆ: 5 ಟಿ-20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಆಘಾತಕಾರಿ ಸೋಲಿನಿಂದ ಚೇತರಿಸಿಕೊಂಡ ಶುಭ್ಮನ್ ಗಿಲ್ ಸಾರಥ್ಯದ ಯುವ ಭಾರತ ತಂಡ, ಆತಿಥೇಯ ಜಿಂಬಾಬ್ವೆಯನ್ನು 4-1 ಅಂತರದಿಂದ ಸೋಲಿಸಿ ಸರಣಿ ಕೈವಶ ಮಾಡಿಕೊಂಡಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ 42 ರನ್‌ಗಳಿಂದ ಜಿಂಬಾಬ್ವೆಯನ್ನು ಸೋಲಿಸಿದೆ.
ತಂಡದ ಈ ಗೆಲುವಿನಲ್ಲಿ ಸಂಜು ಸ್ಯಾಮ್ಸನ್ ಮತ್ತು ಮುಖೇಶ್ ಕುಮಾರ್ ಪ್ರಮುಖ ಪಾತ್ರವಹಿಸಿದರು. ತಂಡದ ಪರ ಮುಖೇಶ್ ಕೇವಲ 22 ರನ್ ನೀಡಿ 4 ವಿಕೆಟ್ ಪಡೆದರೆ, ದುಬೆ 2 ವಿಕೆಟ್ ಪಡೆದರು. ಉಳಿದ ಬೌಲರ್‌ಗಳು ತಲಾ 1 ವಿಕೆಟ್ ಪಡೆದರು.
ಕಳೆದ ಒಂದು ವಾರದಲ್ಲಿ ಯುವ ಆಟಗಾರರಿಂದ ತುಂಬಿರುವ ತಂಡ ಪ್ರದರ್ಶನ ನೀಡಿದ ರೀತಿಯನ್ನು ನೋಡಿದರೆ ಜುಲೈ 6 ರಂದು ಹರಾರೆಯಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಆಘಾತಕಾರಿ ಸೋಲಿನ ನೋವು ಸಂಪೂರ್ಣವಾಗಿ ಮಾಯವಾಗಿದೆ. ಆದಾಗ್ಯೂ, ಆ ಸೋಲು ಖಂಡಿತವಾಗಿಯೂ ತಂಡಕ್ಕೆ ಎಚ್ಚರಿಕೆಯ ಗಂಟೆಯಾಗಿ ಕಾರ್ಯನಿರ್ವಹಿಸಿತು.
ಅದರ ಪರಿಣಾಮ ಮುಂದಿನ 4 ಪಂದ್ಯಗಳಲ್ಲಿ ಗೋಚರಿಸಿತು. ಪ್ರತಿಯೊಂದು ಪಂದ್ಯದಲ್ಲೂ ವಿಭಿನ್ನ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ 4-1 ಅಂತರದಲ್ಲಿ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪವರ್ ಪ್ಲೇನಲ್ಲಿ 3 ವಿಕೆಟ್: ಸರಣಿಯ ಕಳೆದ 4 ಪಂದ್ಯಗಳಲ್ಲಿ ನಿರಂತರವಾಗಿ ಟಾಸ್ ಸೋತಿದ್ದ ಜಿಂಬಾಬ್ವೆ ನಾಯಕ ಸಿಕಂದರ್ ರಜಾ ಈ ಬಾರಿ ಟಾಸ್ ಗೆದ್ದು, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಉತ್ತಮ ಆರಂಭ ಪಡೆದಿತ್ತು. ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ 13 ರನ್ ಬಾರಿಸಿದರು. ವಾಸ್ತವವಾಗಿ, ಸಿಕಂದರ್ ರಜಾ ಬೌಲಿಂಗ್ ಮಾಡಿದ ಮೊದಲ ಎಸೆತದಲ್ಲಿ ಜೈಸ್ವಾಲ್ ಸಿಕ್ಸರ್ ಬಾರಿಸಿದರು. ಇದಾದ ಬಳಿಕ ಫ್ರೀ ಹಿಟ್ನ ಲಾಭ ಪಡೆದು ಮತ್ತೊಂದು ಸಿಕ್ಸರ್ ಬಾರಿಸಿದರು.
ಆದರೆ, ಈ ಓವರ್‌ನ ನಾಲ್ಕನೇ ಎಸೆತದಲ್ಲಿ ರಾಝಾ, ಜೈಸ್ವಾಲ್ರನ್ನು ಔಟ್ ಮಾಡಿದರು. ಇದಾದ ಬಳಿಕ ಕೇವಲ 14 ರನ್ ಗಳಿಸಲಷ್ಟೇ ಶಕ್ತರಾದ ಅಭಿಷೇಕ್ ಶರ್ಮಾ 2ನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡರು. ಕ್ಯಾಪ್ಟನ್ ಗಿಲ್ ಕೂಡ 13 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಪವರ್‌ಪ್ಲೇಯಲ್ಲಿ ಭಾರತ ಮೂರು ವಿಕೆಟ್ ಕಳೆದುಕೊಂಡಿತು.
ಸಂಜು-ಪರಾಗ್ ಜೊತೆಯಾಟ
ಇದಾದ ನಂತರ ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇವರಿಬ್ಬರ ನಡುವೆ 4ನೇ ವಿಕೆಟ್‌ಗೆ 65 ರನ್‌ಗಳ ಜೊತೆಯಾಟವಿತ್ತು. 15ನೇ ಓವರ್‌ನಲ್ಲಿ ಪರಾಗ್ 22 ರನ್ ಗಳಿಸಿ ಔಟಾದರು.
ಆದರೆ, ಸಂಜು ಸ್ಯಾಮ್ಸನ್ 58 ರನ್‌ಗಳ ಬಿರುಸಿನ ಇನ್ನಿಂಗ್ಸ್‌ನ ನಂತರ ಪೆವಿಲಿಯನ್‌ಗೆ ಮರಳಿದರು. ಈ ಪಂದ್ಯದಲ್ಲಿ ಶಿವಂ ದುಬೆ 26 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ರಿಂಕು 11 ರನ್ ಗಳಿಸಿ ಅಜೇಯರಾಗಿ ಉಳಿದರು. ಜಿಂಬಾಬ್ವೆ ಪರ ಮುಜರಬಾನಿ 2 ವಿಕೆಟ್ ಪಡೆದರೆ, ರಾಝಾ ರಿಚರ್ಡ್ ಮತ್ತು ಮಾವುಟಾ ತಲಾ ಒಂದು ವಿಕೆಟ್ ಪಡೆದರು.
ಜಿಂಬಾಬ್ವೆಗೆ ಆರಂಭಿಕ ಆಘಾತ
ಭಾರತ ನೀಡಿದ 168 ರನ್‌ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆಗೆ ಮುಖೇಶ್ ಕುಮಾರ್ ಬ್ಯಾಕ್ ಟು ಬ್ಯಾಕ್ ಶಾಕ್ ನೀಡಿದರು. ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಅವರು ಆರಂಭಿಕ ವೆಸ್ಲಿ ಮಾಧೆವೆರೆ ಅವರನ್ನು ಔಟ್ ಮಾಡಿದರೆ, ಮೂರನೇ ಓವರ್‌ನಲ್ಲಿ ಬ್ರಿಯಾನ್ ಬೆನೆಟ್ ಅವರನ್ನು ಪೆವಿಲಿಯನ್‌ಗಟ್ಟಿದರು.
ಆ ಬಳಿಕ ಜಿಂಬಾಬ್ವೆ ತಂಡದ ಇನ್ನಿಂಗ್ಸ್ ನಿಭಾಯಿಸಿದ ಡಿಯೋನ್ ಮೈಯರ್ಸ್ (34) ಮತ್ತು ಟಿ ಮರುಮಣಿ (27) 44 ರನ್‌ಗಳ ಜೊತೆಯಾಟ ಆಡಿದರು. ಆದರೆ ವಾಷಿಂಗ್ಟನ್ ಸುಂದರ್ ಮರುಮಣಿ ಅವರನ್ನು ಎಲ್ ಬಿಡಬ್ಲ್ಯು ಔಟ್ ಮಾಡುವ ಮೂಲಕ ಈ ಜೊತೆಯಾಟವನ್ನು ಮುರಿದರು.
ಫರಾಜ್ ಅಕ್ರಂ ಸ್ಫೋಟಕ ಬ್ಯಾಟಿಂಗ್
ನಂತರ ದುಬೆ, ಮೈಯರ್ಸ್ ಅವರನ್ನು ಪೆವಿಲಿಯನ್‌ಗಟ್ಟಿದರು. ಜಿಂಬಾಬ್ವೆಯ ಕೊನೆಯ ಭರವಸೆಯಾಗಿದ್ದ ನಾಯಕ ಸಿಕಂದರ್ ರಾಝಾ ರನೌಟ್ಗೆ ಬಲಿಯಾದರು. ಇಲ್ಲಿಂದ ಟೀಂ ಇಂಡಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಆದರೆ ಕೆಳಕ್ರಮಾಂಕದಲ್ಲಿ ಹೊಡಿಬಡಿ ಆಟ ಪ್ರದರ್ಶಿಸಿದ ಫರಾಜ್ ಅಕ್ರಂ 27 ರನ್ (13 ಎಸೆತ) ಬಾರಿಸಿ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ಆದರೆ ಮುಕೇಶ್ ಕುಮಾರ್ ಉಳಿದ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಔಟ್ ಮಾಡಿ ಜಿಂಬಾಬ್ವೆಯನ್ನು ಕೇವಲ 125 ರನ್‌ಗಳಿಗೆ ಆಲೌಟ್ ಮಾಡಿದರು.