ಮುಂಬೈ: ಐಪಿಎಲ್ ನಲ್ಲಿ ಬಿಸಿಸಿಐ ಬ್ರಾಡ್ ಕಾಸ್ಟ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬ್ರಿಟನ್ ಮೂಲದ ವ್ಯಕ್ತಿಯೊಬ್ಬರು ಮುಂಬೈನ ತಮ್ಮ ಹೋಟೆಲ್‌ನಲ್ಲಿ ಸಾವಿಗೀಡಾಗಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
76 ವರ್ಷದ ಬ್ರಾಡ್ ಕಾಸ್ಟ್ ಎಂಜಿನಿಯರ್ ಜಾನ್ ವಿಲಿಯಂ ಲ್ಯಾಂಗ್ ಪೋರ್ಡ್ ಅವರು ಮುಂಬೈನ ತಮ್ಮ ಹೋಟೆಲ್ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೋಟೆಲ್ ಸಿಬ್ಬಂದಿ ಅವರನ್ನು ತಕ್ಷಣ ಬಾಂಬೆ ಆಸ್ಪತ್ರೆಗೆ ಸಾಗಿಸಿದರು. ಆಸ್ಪತ್ರೆಗೆ ಬರುವ ಮುಂಚೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ದೃಢೀಕರಿಸಿದ್ದಾರೆ.
ಲ್ಯಾಂಗ್ ಪೋರ್ಟ್ ಅವರು ಐಪಿಎಲ್ ಪಂದ್ಯಾವಳಿಗಾಗಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಯಾವುದೇ ಅನುಮಾನಾಸ್ಪದ ಅಂಶಗಳು ಕಂಡುಬಂದಿಲ್ಲ, ಹೀಗಾಗಿ ಆಕಸ್ಮಿಕ ಸಾವಿನ ಪ್ರಕಣ ದಾಖಲಿಸಿಕೊಂಡಿದ್ದು, ಸಾವಿಗೆ ನಿಖರ ಕಾರಣ ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

