ನ್ಯೂಯಾರ್ಕ್: ಅಮೆರಿಕ ಒಡೆತನದ ತೈಲ ಟ್ಯಾಂಕರ್ ಮೇಲೆ ಪ್ರಾದೇಶಿಕ ನೀರಿನೊಳಗೆ ಇರಾನ್ ನಡೆಸಿದ ಆತ್ಮಾಹುತಿ ದೋಣಿ ದಾಳಿಯಲ್ಲಿ ಓರ್ವ ಭಾರತೀಯ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇರಾಕ್‌ನ ಪ್ರಾದೇಶಿಕ ನೀರನ ಪ್ರದೇಶವಾದ ಖೋರ್ ಅಲ್ ಜುಬೈರ್ ಬಂದರಿನಲ್ಲಿ ಅಮೆರಿಕ ಒಡೆತನದ ಮತ್ತು ಮಾರ್ಷಲ್ ದ್ವೀಪ ಧ್ವಜವನ್ನು ಹೊಂದಿರುವ ತೈಲ ಟ್ಯಾಂಕರ್ ‘ಸಫೆಸಿಯಾ ವಿಷ್ಣು’ ಮೇಲೆ ಇರಾನ್ ಆತ್ಮಾಹುತಿ ದೋಣಿ ದಾಳಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಸಾವನ್ನಪ್ಪಿದ ಭಾರತೀಯ ಪ್ರಜೆಯ ಹೆಸರನ್ನು ಪ್ರಸ್ತುತ ಗೌಪ್ಯವಾಗಿಡಲಾಗಿದೆ ಎಂದು ವರದಿಯಾಗಿದೆ. ಆದರೆ ತೈಲ ಟ್ಯಾಂಕರ್‌ನಲ್ಲಿದ್ದ ಉಳಿದ 27 ಸಿಬ್ಬಂದಿಯನ್ನು ರಕ್ಷಿಸಿ ಬಸ್ರಾಗೆ ಕರೆದೊಯ್ಯಲಾಗಿದೆ. ದಾಳಿಯಲ್ಲಿ ಭಾರತೀಯ ಪ್ರಜೆ ಸಾವನ್ನಪ್ಪಿದ ಸುದ್ದಿ ತಿಳಿದು ಕಂಪನಿ ಸಂತಾಪ ಸೂಚಿಸಿದೆ ಎಂದು ಸಫೆಸಿಯಾ ಕಂಪನಿ ಆಪ್ತ ಮೂಲಗಳು ತಿಳಿಸಿವೆ.
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಮಧ್ಯೆ, ದಾಳಿಯನ್ನು ಬಲವಾಗಿ ಖಂಡಿಸಬೇಕು. ಈ ಪ್ರದೇಶದಲ್ಲಿ ಹಡಗುಗಳಲ್ಲಿರುವ ಸಿಬ್ಬಂದಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಜಾಗತಿಕವಾಗಿ ಭಾರತೀಯರು ಶೇ.15ಕ್ಕಿಂತ ಹೆಚ್ಚು ನಾವಿಕರಿರುವುದರಿಂದ, ಇರಾನ್ ಯಾವುದೇ ಹಡಗನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದರೂ, ಭಾರತೀಯ ಪ್ರಜೆಗಳು ಹಾನಿಗೊಳಗಾಗುತ್ತಾರೆ ಎಂದು ಮೂಲಗಳು ಕಳವಳ ವ್ಯಕ್ತಪಡಿಸಿವೆ.
ವೆಸೆಲ್ ಫೈಂಡರ್ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ, 228.6 ಮೀಟರ್ ಉದ್ದ ಮತ್ತು 32.57 ಮೀಟರ್ ಅಗಲವಿರುವ ಸಫೆಸಿಯಾ ವಿಷ್ಣು 2007ರಲ್ಲಿ ನಿರ್ಮಿಸಲಾದ ಕಚ್ಚಾ ತೈಲ ಟ್ಯಾಂಕರ್ ಆಗಿದ್ದು, ಪ್ರಸ್ತುತ ಮಾರ್ಷಲ್ ದ್ವೀಪಗಳ ಧ್ವಜದಡಿಯಲ್ಲಿ ಪ್ರಯಾಣಿಸುತ್ತಿದೆ.

