ವಿಜಯಪುರ: “ವಿಜಯಪುರ ಹಾಗೂ ಈ ಭಾಗದ 93 ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಒದಗಿಸಲು ರೂ.3200 ಕೋಟಿ ಮೊತ್ತದ ಯೋಜನೆಗಳನ್ನು ರೂಪಿಸಲಾಗಿದೆ” ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಇಂಡಿ ತಾಲೂಕಿನಲ್ಲಿ ಸೋಮವಾರ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. “ನಿಮ್ಮ ಶಾಸಕರು ನನಗೆ ಏನೂ ಬೇಡ, ನಮ್ಮ ಭಾಗದ ರೈತರಿಗೆ ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಹೊರ್ತಿ- ರೇವಣ್ಣ ಸಿದ್ದೇಶ್ವರ ಏತ ನೀರಾವರಿ, ತಿಡಗುಂದಿ ಶಾಖಾ ಕಾಲುವೆ ಹಾಗೂ ಇಂಡಿ ತಾಲೂಕಿನ 90 ಕೆರೆಗಳನ್ನು ಭರ್ತಿಗೊಳಿಸುವ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ಮಾಡಲಾಗಿದೆ. ವಿವಿಧ ಇಲಾಖೆಗಳಿಂದ ಒಟ್ಟಾರೆ 4,555 ಕೋಟಿ ಮೊತ್ತದ ಕಾಮಗಾರಿಗಳಿಗೆ ಇಂದು ಭೂಮಿ ಪೂಜೆ ಹಮ್ಮಿಕೊಂಡಿದ್ದೇವೆ” ಎಂದರು.
“ಸರ್ಕಾರದಲ್ಲಿ ಹಣವಿಲ್ಲ, ಎಲ್ಲಾ ಹಣ ಗ್ಯಾರಂಟಿ ಯೋಜನೆಗಳಿಗೆ ಹೋಗಿವೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಇಂದು ಸಾರಿಗೆ ಇಲಾಖೆ ಮೂಲಕ ಜಾರಿಗೆ ತಂದ ಶಕ್ತಿ ಯೋಜನೆಯಲ್ಲಿ ಇಂದಿನವರೆಗೆ ಒಟ್ಟು 500 ಕೋಟಿ ಟ್ರಿಪ್ ಗಳನ್ನು ಪೂರೈಸಿದೆ. ಇಂದು ಮುಖ್ಯಮಂತ್ರಿಗಳು ಪ್ರಯಾಣಿಕರಿಗೆ 500ನೇ ಟಿಕೆಟ್ ನೀಡಿ ಈ ಕ್ಷಣವನ್ನು ಸಂಭ್ರಮಿಸಲಾಗಿದೆ. ಈ ಯೋಜನೆಗೆ ಇದುವರೆಗೂ 12,669 ಕೋಟಿ ವೆಚ್ಚ ಮಾಡಲಾಗಿದೆ. ಇದು ನಮ್ಮ ಗ್ಯಾರಂಟಿ ಯೋಜನೆ. ಆದರೆ ಕ್ಷೇತ್ರದಲ್ಲಿ ಇಂದು 4,555 ಕೋಟಿ ಮೊತ್ತದ ಯೋಜನೆಗೆ ಶಂಕುಸ್ಥಾಪನೆ ಮಾಡಿರುವುದು ಅಭಿವೃದ್ಧಿಯ ಯೋಜನೆ” ಎಂದು ತಿಳಿಸಿದರು.
“ಬಿಜೆಪಿ ಟೀಕೆಗಳು ಸಾಯುತ್ತವೆ, ನಮ್ಮ ಯೋಜನೆಗಳು ಶಾಶ್ವತವಾಗಿ ಉಳಿಯುತ್ತವೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ನಂಬಿಕೆ ಬಹಳ ಮುಖ್ಯವಾದುದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾರಿಗೆ ಇಲಾಖೆಯಲ್ಲಿ 5,700 ಹುದ್ದೆ, ಪರಿಶಿಷ್ಟರಿಗೆ ವಿಶೇಷ ಯೋಜನೆ ನೀಡಿ 2 ಕೋಟಿ ಮೊತ್ತದವರೆಗೂ ಗುತ್ತಿಗೆಯಲ್ಲಿ ಮೀಸಲಾತಿ ನೀಡಲಾಗಿದೆ. ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತಿ ವರ್ಷ 5 ಸಾವಿರ ಕೋಟಿ ನೀಡುವುದಾಗಿ ಮಾತು ಕೊಟ್ಟಿತ್ತು. ಅದರಂತೆ ನಾವು ನೀಡುತ್ತಿದ್ದೇವೆ. ಆಮೂಲಕ ಈ ಭಾಗದ ಸುಮಾರು 42 ಕ್ಷೇತ್ರಗಳಿಗೆ ಸರಾಸರಿಯಲ್ಲಿ 100 ಕೋಟಿ ಅನುದಾನ ಸಿಗಲಿದೆ. ಈ ಭಾಗದಲ್ಲಿ ಅನೇಕ ಯೋಜನೆ ಜಾರಿಗೆ ತಂದಿದ್ದೇವೆ” ಎಂದು ತಿಳಿಸಿದರು.