ಅಂಕಣ ಅಪರಾಧ ರಾಜಕೀಯ ಸುದ್ದಿ

ದೊಡ್ಡವರ ಮನೆಯ ಡ್ರೈವರ್ ಗಳಾಗೋದೆ ತಪ್ಪಾ ?

Share It

ಪೆನ್‌ ಡ್ರೈವ್ ಬರಲಿ, ಸಿಡಿ ಇರ‍್ಲಿ, ಡ್ರೈವರ್ ಗಳೇ ಕೇಡಿಗಳು !
ಹಣ ಬರುತ್ತೆ, ಆದ್ರೆ ಆರೋಪ ಬಂದ್ರೆ ಅವ್ರೆ ಮೊದ್ಲ ಬಲಿ
ವೈಟ್‌ಪೇಪರ್ ವಿಶೇಷ
ಬೆಂಗಳೂರು:
ಆರ್ ತಿಂಗ್ಳ ಹಿಂದೆ ನಮ್ಮೂರ್ ಕಡೆ ಹುಡ್ಗ ಒಬ್ಬ, ಅಣ್ಣ ನಂಗೆ ಎಲ್ಲಾದೂ ಡ್ರೈವರ್ ಕೆಲ್ಸ ಇದ್ರೆ ನೋಡು ಅಂತ ಹೇಳಿದ್ದ, ನೋಡೋಣ ಬಿಡಪ್ಪ ಅಂದಿದ್ದೆ. ಮೊನ್ನೆ ಮೊನ್ನೆ ಯಾರೋ ಒಬ್ರು ದೊಡ್ಡೋರು, ನಂಗೊಬ್ಬ ಡ್ರೈವರ್ ಬೇಕು ಇದ್ರೆ ಹೇಳಿ ಅಂದ್ರು.

ನಮ್ ಹುಡ್ಗ ಹೇಳಿದ್ಕು, ಅದ್ಕು ಸಿಂಕ್ ಆಯ್ತು, ಇದಾನೆ ಹೇಳ್ತೀನಿ ಇರಿ ಅಂದ್ಬುಟ್ಟು, ನೋಡಪ್ಪ, ಹಿಂಗೆ, ಇಬ್ರು ಪೊಲಿಟೀಷಿಯನ್ ಹತ್ರ ಡ್ರೈವರ್ ಕೆಲ್ಸ ಐತೆ, ಒಳ್ಳೆ ಸಂಬ್ಳ ಕೊಡ್ತಾರೆ ಹೋಗ್ ಸೇರ್ಕೊ ಅಂದೆ. ಅಣ್ಣ ದಯ್ವಿಟ್ಟು ಬ್ಯಾಡ ಕಣಣ್ಣ, ನಾನ್ ಈಗ “ಓಲಾ” ಓಡಿಸ್ಕಂಡ್ ಆರಾಮಾಗಿದ್ದೀನಿ, ಆ ಸವಾಸನೇ ಬ್ಯಾಡ ಅಂದ್ಬಿಟ್ಟ.

ಹುಡ್ಗ ಯಾಕಿಂಗ್ ಅಂದ ಅಂತ ನಂಗೆ ದಿನವೀಡಿ ಕಾಡ್ತಾ ಇತ್ತು. ಹುಡ್ಗ ಯಾಕಿಂಗ್ ಅಂದ ಅಂತ ಯೋಚ್ನೆ ಮಾಡ್ತಾ ಮಾಡ್ತಾ, ಸುದ್ದಿಗಳ್ ಮೇಲ್ ಕಣ್ಣಾಡಿಸ್ತಿದ್ದೆ. ಆಗ ನಂಗೆ ಗೊತ್ತಾಗಿದ್ದೇನಪ್ಪ ಅಂದ್ರೆ, ದೊಡ್ಡೋರ್ ಮನೆ ಡ್ರೈವರ್ ಆಗೋದ್ ಅಷ್ಟು ಸುಲಭ ಅಲ್ಲ, ಅದಕ್ಕೆ ಎಲ್ಲಾನು ಬಿಟ್ಟು ನಿಂತ್ಕೋಬೇಕು. ಅದ್ಕೆ ನಮ್ಮುಡ್ಗ ಹೆದ್ರವ್ನೆ ಅಂತ.

ಅಷ್ಟಕ್ಕೂ ಅವ್ನಿಗೆ ಈ ಭಯ ಬರೋಕೆ ಕಾರಣ, ಕಳೆದ್ ಒಂದ್ ವಾರದಲ್ಲಿ ಕೇಳಿರ‍್ತಿರೋ ಡ್ರೈವರ್‌ಗಳಿಗೆ ಸಂಬಂಧಪಟ್ಟ ಪ್ರಕರಣಗಳು. ಅಪಘಾತ ಬಿಡಿ, ದಿನ ನಡೀತಾ ಇರುತ್ತೆ. ಅದ್ಕೆಲ್ಲ ಡ್ರೈವರ್‌ ಒಂದಿಂಚು ಹೆದ್ರೋಲ್ಲ, ಆದ್ರೆ, ಅದನ್ನು ಮೀರಿ ನಡೆಯೋ ಕೆಲ್ವು ಘಟನೆಗಳು ಡ್ರೈವರ್‌ ಕೆಲ್ಸ ಯಾಕ್ ಬೇಕು ಅನ್ನೋ ಹಂಗೆ ಮಾಡ್ಬುಟ್ಟದೆ ಅಂದ್ರ ತಪ್ಪಿಲ್ಲ.

ಪೆನ್‌ ಡ್ರೈವ್ ಕೇಸಲ್ಲಿ ಇಬ್ರು ಡ್ರೈವರ್‌ಗಳು ತಗ್ಲಾಕೊಂಡವ್ರೆ, ಪ್ರಜ್ವಲ್ ಮಾಡಿದ ಲೈಂಗಿಕ ದೌರ್ಜನ್ಯಗಳೆಲ್ಲ ಇರೋ ಪೆನ್‌ಡ್ರೈವ್ ಇಟ್ಕಂಡು, ಅದನ್ನು ಹಂಚಿಕೆ ಮಾಡಿದ್ ಒಬ್ಬ ಡ್ರೈವರ್‌, ಈಗ ಎಸ್‌ಐಟಿ ಪೊಲೀಸ್ರು ಹುಡ್ಕಿದ್ರು ಸಿಗ್ದಂಗೆ ತಪ್ಪಿಸ್ಕಂಡವ್ನೆ. ಇವತ್ತಲ್ಲ ನಾಳೆ ಸಿಗ್ಲೇಬೇಕು. ಆದ್ರೆ, ದುಡ್ಡಿರೋರು ಬಚಾವಾಗ್ತಾರೆ, ಡ್ರೈವರ್‌ ಕತೆ ಏನೋ ಗೊತ್ತಿಲ್ಲ ಅನ್ನೋದು ಡ್ರೈವರ್‌ ಗಳ ಅಂಬೋಣ.

ಅಷ್ಟಕ್ಕೂ ಆ ಡ್ರೈವರ್‌ ಏನ್ ಅಮಾಯಕ ಅಲ್ಲ, ಆತ ಮೊದ್ಲೇ ಒಂದ್ ಸಲ ಬಂದು, ನನ್ನ ಹೆಸ್ರಲ್ಲಿ ಬೇನಾಮಿ ಆಸ್ತಿ ಮಾಡಿದ್ರು, ನನ್ ಹೆಂಡ್ತೀನಾ ಕೂಡಿ ಹಾಕಿದ್ರು ಅಂತೆಲ್ಲ ಆರೋಪ ಮಾಡಿದ್ದ, ಒಟ್ನಲ್ಲಿ ದೊಡ್ಡೋರ್ ಹೆಸ್ರಲ್ಲಿ ಒಂದಷ್ಟು ಆಸ್ತಿ ಪಾಸ್ತಿ ಮಾಡ್ಕೊಂಡವ್ನೆ ಅನ್ನೊದು ಅಲ್ಲಿ ಗೊತ್ತಾಗಿತ್ತು.

ಇನ್ನು ಇನ್ನೊಂದ್ ಕೇಸಲ್ಲಿ, ಭವಾನಿ ಮೇಡಮ್ನೋರ್ ಡ್ರೈವರ್‌ ಸಿಕ್ಕಾಕಂಡವ್ನೆ, ಪ್ರಜ್ವಲ್ ಪ್ರಕರಣದ ಸಂತ್ರಸ್ತೆಯನ್ನು ಕಾರಲ್ಲಿ ಎತ್ತಾಕ್ಕಂಡ್ ಬಾ ಅಂತ ಮೇಡಮ್ಮ್ ಹೇಳಿದ್ರಂತೆ, ಅಣ್ಣ ಹೋಗಿ ರ‍್ಕಂಡ್ ಬಂದಿದ್ದ, ಅವ್ನ ಮ್ಯಾಲೀಗ ಎಫ್‌ಐಆರ್ ಆಗ್ಯದೆ. ಎಸೈಟಿ ಎರಡ್ ಸಮನ್ಸ್ ಕಳಿಸಿ, ಸಿಕ್ಕಿದ್ರೆ ಒಳಿಕಾಕಕ್ ಕಾಯ್ತಾ ಐತೆ.

ಇದು ಪೆನ್‌ ಡ್ರೈವ್ ಪ್ರಕರಣದ ಡ್ರೈವರ್‌ಗಳ ಕತೆಯಾದ್ರೆ, ಸಿಡಿ ಕೇಸಲ್ಲೂ ಡ್ರೈವರ್‌ಗಳೇ ಕೇಡಿಗಳು, ಸ್ವಾಮೀಜಿಯೊಬ್ರು ಸಿಡಿಯಲ್ಲಿ ಸಿಕ್ಕಾಕೊಂಡ್ರು, ಅದುನ್ನ ಮಾಡಿದ್ದು, ಡ್ರೈವರ್‌ ಅಂತ ಬಂತು. ಆಗ್ಲಿಂದ ಯಾರೇ ಆಗ್ಲಿ ತಮ್ ಡ್ರೈವರ್‌ ಮ್ಯಾಲೊಂದ್ ಕಣ್ಣ್ ಇಟ್ಟೇ ಇಟ್ಟರ‍್ತಾರೆ. ಡ್ರೈವರ್‌ ಅಂದ್ರೆ ಸಾಕು ಬಲ್ ಉಸಾರಾಗರ‍್ಬೇಕು ಅಂತ ಫಿಕ್ಸ್ ಆಗ್ಯವ್ರೆ.

ರಾಜ್ಕಾರಣಿಗಳು, ಸ್ವಾಮೀಜಿಗಳದ್ದು ಈ ಕತೆಯಾದ್ರೆ, ದುಡ್ಡಿರೋ ಶ್ರೀಮಂತ್ರು ಮನೇಲಿದ್ರೆ ಮತ್ತೊಂದ್ ಪಜೀತಿ. ಪುಣೆಯಲ್ಲಿ ಆಕ್ಸಿಡೆಂಡ್ ಮಾಡಿದ್ ಹುಡ್ಗುನ್ ಕೇಸಲ್ಲಿ, “ಸಪ್ತಸಾಗರದಾಚೆ” ಸ್ಟೋರಿನ ರಿಪೀಟ್ ಮಾಡಿದ್ರಂತೆ. ಅಷ್ಟಕ್ಕೂ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ರು ದೊಡ್ಡೋರ್ ಮನೇಲಿ ಡ್ರೈವರ್‌, ಅವ್ರ ಮನೇ ಹುಡ್ಗ ಆಕ್ಸಿಡೆಂಟ್ ಮಾಡಿ, ಒಬ್ರುನ್ನ ಸಾಯಿಸ್ತಾನೆ, ಆದ್ರೆ ಆತ ಜೈಲಿಗೋಗಂಗಿಲ್ಲ.

ಅದ್ಕೆ ಯಜ್ಮಾನ, ಡ್ರೈವರ್‌ನ ಕರ‍್ದು, ನನ್ ಮಗ ಇದನ್ನ ಮಾಡಿಲ್ಲ, ನೀನೆ ಮಾಡ್ದೆ ಅಂತ ಒಪ್ಕಂಡು ಜೈಲಿಗೋಗು, ನಾನು ನಿಂಗೆ ಕೇಳ್ದಷ್ಟು ದುಡ್ಡು ಕೊಟ್ತೀನಿ, ನಿನ್ನನ್ನ ಆದಷ್ಟ್ ಬೇಗ ಬೇಲ್ ಕೊಟ್ಟು ಬಿಡಿಸ್ಕಂಡ್ ಬತ್ತೀನಿ ಅಂತ ಆಸೆ ಹುಟ್ಟುಸ್ತಾನೆ. ಆದ್ರೆ ಜೈಲಿಗೋಯ್ತಿದ್ದಂತೆ, ಓನರ್ ಸತ್ತೋಯ್ತಾನೆ, ಹೀರೋ ಜೈಲಲ್ಲಿ ಸಿಕ್ಕಾಕೊಂಡ್ ಅದ್ರಿಂದ ಹೊರ‍್ಗಡೆ ಬರೋಕಾಗ್ದೆ ಒದ್ದಾಡ್ತಾನೆ.

ಪಾಪ ಪುಣೆ ಡ್ರೈವರ್‌, ಈ ಸಿನ್ಮಾ ನೋಡಿದ್ನೋ ಏನೋ, ಓನರ್ ಮಾತಿಗೆ ಓಕೆ ಅಂದಿಲ್ಲ. “ಬಡ್ಡೀಮಗ್ನೆ ನಮ್ಮನೇಲೇ ಇದ್ಕಂಡು, ನಮ್ಮುಡ್ಗುನ್ನ ಉಳ್ಸೋಕೆ ಅರೆಸ್ಟ್ ಆಗು ಅಂದ್ರೆ ಆಗಲ್ಲ ಅಂತಿಯಾ ಅವ್ನುನ್ನ ಕೂಡಾಕ್ಕಂಡು, ಒಪ್ಕೊಳ್ಳೋರ‍್ಗೂ ಬುಡಲ್ಲ ಅಂತಿದ್ರಂತೆ, ಪೊಲೀಸ್ನೋರೋಗಿ ಅಂಡ್‌ಮ್ಯಾಲ್ಕೊಟ್ಟು, ಅರೆಸ್ಟ್ ಮಾಡವ್ರೆ ಓನರಪ್ಪನ್ನ. ಹಿಂಗೆ ಪಾಪಾ ದೊಡ್ಡೋರ್ ಮನೆ ಡ್ರೈವರ್ ಆದ್ರೆ ಸಂಕ್ಟ ಪಡ್ಬೇಕು ಅಂತ್ಲೋ ಏನೋ, ನಮ್ಮುಡ್ಗ ನಾನ್ ಡ್ರೈವರ್ ಕೆಲ್ಸ ಕೊಡಿಸ್ತೀನಿ ಹೋಗು ಅಂದ್ರು ಹೋಗಲ್ಲ ಅಂದ. ಆಮೇಲ್ ಇದೆಲ್ಲ ನೋಡಿದ್ ಮ್ಯಾಲೆ ನಂಗೂ ಅವ್ನು ಹೋಗ್ದೆ ಇದ್ದಿದ್ದೆ ಒಳ್ಳೇದಾಯ್ತು ಅನ್ನಿಸ್ತು.


Share It

You cannot copy content of this page