ಬೆಂಗಳೂರು: ಎನ್‌ಡಿಎ ಒಕ್ಕೂಟದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂವಿಧಾನವನ್ನು ಪೂಜಿಸುವ ಮೂಲಕ ಸಂವಿಧಾನ ಬದಲಾವಣೆ ಮಾಡ್ತಾರೆ ಎಂಬ ವಿಪಕ್ಷಗಳ ಟೀಕೆಗೆ ಉತ್ತರ ನೀಡಿದ್ದಾರೆ.
ಬಿಜೆಪಿ 400 ಸ್ಥಾನ ಗೆದ್ದರೆ ಸಂವಿಧಾನ ಬದಲಾವಣೆ ಮಾಡುತ್ತದೆ ಎಂಬ ಅಂಶವನ್ನಿಟ್ಟುಕೊಂಡೆ ಇಡೀ ದೇಶಾದ್ಯಂತ ರಾಹುಲ್ ಗಾಂಧಿ ಪ್ರಚಾರ ಮಾಡಿದ್ದರು. ತಮ್ಮ ಪ್ರಚಾರ ಭಾಷಣದುದ್ದಕ್ಕೂ ಸಂವಿಧಾನದ ಪ್ರತಿಯನ್ನು ಕೈಯಲ್ಲಿಡಿದೆ ಭಾಷಣ ಮಾಡಿದ್ದರು.
ಕೆಲವು ಬಿಜೆಪಿ ಸಂಸದರು, ಅಭ್ಯರ್ಥಿಗಳು ಮತ್ತು ಬಿಜೆಪಿಯ ಬೆಂಬಲಿಗರು ನಾವು 400 ಸ್ಥಾನ ಗೆದ್ದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಹೇಳಿಕೆಯನ್ನು ನೀಡುತ್ತಲೂ ಇದ್ದರು, ಇದು ಸಹಜವಾಗಿಯೇ ದಲಿತರು, ಹಿಂದುಳಿದವರು, ಮತ್ತು ಅಲ್ಪಸಂಖ್ಯಾತರು ಭಯಗೊಳ್ಳುವಂತೆ ಮಾಡಿತ್ತು. ಅವರ ಭಯವೇ ಇಂದು ಬಿಜೆಪಿ ೪೦೦ ಗಡಿ ಮುಟ್ಟದಿರಲು ಕಾರಣವಾಗಿದೆ.
೪೦೦ ಅಲೆಯಲ್ಲಿ ತೇಲುತ್ತಿದ್ದ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ, ತಮ್ಮ ಗುರಿಗೆ ಅಡ್ಡಲಾದ ಅಂಶ ಯಾವುದು ಎಂಬುದನ್ನು ಬಹುಬೇಗ ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ, ಮುಂದೆ ಸಂವಿಧಾನ ಬದಲಾವಣೆಯಂತಹ ಹೇಳಿಕೆ ಮತ್ತು ನಡೆ ನಡೆಯದು ಎಂಬುದನ್ನು ಅರ್ಥ ಮಾಡಿಕೊಂಡು, ಇಂತಹದ್ದೊಂದು ಭಾವನೆ ಮೂಡಿದ್ದ ಜನರಿಗೆ ಸಂದೇಶ ಕೊಡುವ ಸಲುವಾಗಿ ನರೇಂದ್ರ ಮೋದಿ ಎನ್‌ಡಿಎ ಮೀಟಿಂಗ್‌ನಲ್ಲಿ ಸಂವಿಧಾನವನ್ನಿಡಿದು, ಪೂಜಿಸಿ ನಂತರ ಮಾತು ಆರಂಭಿಸಿದ್ದಾರೆ.
ಮೋದಿ ಮೂರನೇ ಬಾರಿಗೆ ಭಾನುವಾರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ದೇಶದ ಜನರಿಗೆ ಒಳ್ಳೆಯದು ಮಾಡಲಿ ಎಂಬುದು ಎಲ್ಲರ ಹಾರೈಕೆ. ಹಾಗೆಯೇ ಸಂವಿಧಾನ ಬದಲಾವಣೆ, ಮೀಸಲಾತಯಿ ಬದಲಾವಣೆಯಂತಹ ವಿಷಯಗಳಿಗೆ ಕೈ ಹಾಕುವುದು ಅಷ್ಟು ಸುಲಭವಲ್ಲ ಎಂಬುದನ್ನು ದೇಶದ ಮತದಾರ ಈಗಾಗಲೇ ಸಾಭೀತು ಮಾಡಿದ್ದಾನೆ. ಹೀಗಾಗಿ, ಎಲ್ಲರನ್ನೂ ವಿಶ್ವಾಸದಿಂದ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿಯೇ ಬಿಜೆಪಿ ಮತ್ತು ಮೋದಿ ಕೆಲಸ ಮಾಡಬೇಕಿದೆ.

