ಬೆಂಗಳೂರು: ಆಡಳಿತಾರೂಢ ಸರಕಾರ ಕಾಂಗ್ರೆಸ್‌ನದ್ದಾದರೂ, ರಾಜಧಾನಿ ಬೆಂಗಳೂರಿನಲ್ಲಿ ಒಂದು ಕ್ಷೇತ್ರವನ್ನೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ, ಬಿಬಿಎಂಪಿ ಚುನಾವಣೆ ನಡೆಸಲು ಮನಸ್ಸು ಮಾಡದಿರುವುದೇ ಕಾಂಗ್ರೆಸ್ ಸೋಲಿಗೆ ಕಾರಣವಾಯ್ತಾ? ಎಂಬುದೊಂದು ಚರ್ಚೆ ಈಗ ಶುರುವಾಗಿದೆ.
ಬಿಬಿಎಂಪಿಗೆ ಚುನಾವಣೆ ನಡೆದು ನಾಲ್ಕು ವರ್ಷಗಳಾಗಿವೆ. ಸೆ.10, 2020 ರಲ್ಲಿ ಬಿಬಿಎಂಪಿ ಸದಸ್ಯರ ಅಧಿಕಾರವಧಿ ಪೂರ್ಣಗೊಂಡಿತ್ತು. ಅಲ್ಲಿಂದ ಇಲ್ಲಿವರೆಗೆ ಚುನಾವಣೆ ನಡೆಸಲು ಆಡಳಿತದಲ್ಲಿರುವ ಸರಕಾರ ಮನಸ್ಸು ಮಾಡಿಲ್ಲ. ಇದು ಸಹಜವಾಗಿಯೇ ಸ್ಥಳೀಯ ನಾಯಕರನ್ನು ರಾಜಕೀಯದಿಂದ ವಿಮುಖರಾಗುವಂತೆ ಮಾಡಿದೆ ಎನ್ನಬಹುದು.
ಬಿಬಿಎಂಪಿ ಚುನಾವಣೆ ನಡೆಯದ 3 ವರ್ಷ ಬಿಜೆಪಿಯೇ ಆಡಳಿತದಲ್ಲಿತ್ತು. ಹಾಗಾದರೆ, ಬಿಜೆಪಿ ಮೇಲೆ ಕೂಡ ಆಕ್ರೋಶ ಇರಬೇಕಿತ್ತಲ್ಲ ಎಂಬ ಪ್ರಶ್ನೆ ಸಹಜ. ಆದರೆ, ಎರಡು ಪಕ್ಷದ ಶಾಸಕರಿಗೆ ಬಿಬಿಎಂಪಿ ಚುನಾವಣೆ ಬೇಕಿರಲಿಲ್ಲ. ಹೀಗಾಗಿ, ಎರಡು ಪಕ್ಷದ ಕಾರ್ಯಕರ್ತರು ಮುನಿಸಿಕೊಂಡಂತಿದ್ದರು.
ಬಿಜೆಪಿ ಸಂಘಟನೆ, ಆರ್‌ಎಸ್‌ಎಸ್ ಸಂಘಟನೆ, ಮುನಿದವರು ಪಕ್ಷದಿಂದ ವಿಮುಖವಾಗದಂತೆ ನೋಡಿಕೊಂಡ ಪರಿಣಾಮ ಬಿಜೆಪಿ ಸ್ಥಳೀಯ ನಾಯಕರು ಕೆಲಸ ಮಾಡಿದರು. ಆದರೆ, ಕಾಂಗ್ರೆಸ್ ನಾಯಕರಿಗೆ ನಾನೇಕೆ ಕೆಲಸ ಮಾಡಬೇಕು ಎಂಬ ಉಡಾಫೆ ಕಾಡುತ್ತಲೇ ಇತ್ತು. ಬಹುತೇಕ ಕಾಂಗ್ರೆಸ್ ಸದಸ್ಯರು, ಲೋಕಸಭೆ ಚುನಾವಣೆಗೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿದರು. ಇದರ ಪರಿಣಾಮ ಕಾಂಗ್ರೆಸ್ ಇಷ್ಟೊಂದು ಹೀನಾಯ ಸೋಲು ಕಾಣುವಂತಾಗಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಈಗಾಗಲೇ 1 ವರ್ಷವಾಗಿದೆ. ಮನಸ್ಸು ಮಾಡಿದ್ದರೆ, 6 ತಿಂಗಳಲ್ಲೇ ಚುನಾವಣೆ ನಡೆಸಿ, ಸ್ಥಳೀಯ ನಾಯಕರಿಗೆ ಅಧಿಕಾರ ಸಿಗುವಂತೆ ಮಾಡಬಹುದಿತ್ತು. ಇದೇ ಅಂಶ ನಾಲ್ಕು ವರ್ಷದಿಂದ ಸುಮ್ಮನಿದ್ದದ್ದು, ಇದೀಗ ಒಂದು ವರ್ಷ ಚುನಾವಣೆ ನಡೆಸದ ಕಾಂಗ್ರೆಸ್ ಮೇಲೆ ನಾಯಕರು ಮುನಿಯುವಂತೆ ಮಾಡಿದೆ.
ಬಿಜೆಪಿ ಕಾರ್ಯಕರ್ತರಿಗೂ ಕಾಂಗ್ರೆಸ್ ಕಾರ್ಯಕರ್ತರಿಗೂ ಬಹಳ ವ್ಯತ್ಯಾಸವಿದೆ. ಬಿಜೆಪಿಯಲ್ಲಿ ಶಿಸ್ತಿನ ಪಕ್ಷ ಎಂಬುದು ಒಂದಷ್ಟು ಉಳಿದುಕೊಂಡಿದೆ. ಆದರೆ, ಕಾಂಗ್ರೆಸ್ ಕಾರ್ಯಕತರು ಅಧಿಕಾರವಿಲ್ಲದಿದ್ದರೆ ಪಕ್ಷದ ಪರ ಕೆಲಸ ಮಾಡುವ ಆಸಕ್ತಿ ತೋರುವುದೇ ಇಲ್ಲ. ಇದೆಲ್ಲ ಗೊತ್ತಿದ್ದರೂ, ಬಿಬಿಎಂಪಿ ಚುನಾವಣೆ ನಡೆಸದೆ ಮುಂದೂಡುತ್ತಿರುವ ನಾಯಕರಿಗೆ ಲೋಕಸಭೆ ಚುನಾವಣೆ ತಕ್ಕ ಪಾಠ ಎನ್ನಲಾಗುತ್ತಿದೆ.
ನಾಲ್ಕು ವರ್ಷದಿಂದ ಬಿಬಿಎಂಪಿ ಅಧಿಕಾರವಿಲ್ಲ, ಜನರೊಂದಿಗೆ ಬಹುತೇಕ ಬಿಬಿಎಂಪಿ ಮಾಜಿ ಸದಸ್ಯರ ಒಡನಾಟವಿಲ್ಲ. ಸಕ್ರಿಯವಾದರೆ, ಸುಖಾಸುಮ್ಮನೆ ಹಣ ವ್ಯಯಿಸಬೇಕು ಎಂದು ಬಹುತೇಕರು ವಾರ್ಡ್ ಭೇಟಿಯನ್ನೇ ಬಿಟ್ಟಿದ್ದಾರೆ. ಹೀಗಿರುವಾಗ ಮತ ಕೇಳಲು ಹೋಗಿ ಮಾಡುವುದಾದರೂ ಏನು ಎಂಬ ಸ್ಥಿತಿಗೆ ತಲುಪಿದ್ದರು. ಇದರ ಪರಿಣಾಮವಾಗಿ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ.
ಇದೀಗ ನಾಲ್ಕನೇ ವರ್ಷ ತುಂಬಿ ಐದನೇ ವರ್ಷಕ್ಕೆ ಕಾಲಿಡುತ್ತಿದ್ದು, ಈಗಲಾದರೂ ಸರಕಾರ ಬಿಬಿಎಂಪಿ ಚುನಾವಣೆ ನಡೆಸಿ, ಸ್ಥಳೀಯ ಮಟ್ಟದಲ್ಲಿ ರಾಜಕೀಯ ಅಧಿಕಾರ ಸಿಗುವಂತೆ ಮಾಡುತ್ತದೆಯೋ, ಇಲ್ಲ ಬಿಜೆಪಿಯಂತೆಯೇ ಮತ್ತಷ್ಟು ದಿನ ಬಿಬಿಎಂಪಿ ಚುನಾವಣೆಯನ್ನು ಎಳೆದುಕೊಂಡು ಹೋಗುತ್ತದೆಯೋ ಕಾದು ನೋಡಬೇಕಿದೆ.

