ನವದೆಹಲಿ: ಇರಾನ್ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ, ಇಸ್ರೇಲ್ ಶನಿವಾರ ಬೆಳಗ್ಗೆ ಇರಾನ್ ಮೇಲೆ ಅನಿರೀಕ್ಷಿತ ದಾಳಿ ನಡೆಸಿದೆ. ರಾಜಧಾನಿ ಟೆಹ್ರಾನ್‌ನಲ್ಲಿ ತೀವ್ರ ಸ್ಫೋಟಗಳು ಸಂಭವಿಸಿರುವ ವರದಿಯಾಗಿವೆ.
ಅಸೋಸಿಯೇಟೆಡ್ ಪ್ರೆಸ್ ವರದಿ ಪ್ರಕಾರ, ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಕಚೇರಿಗಳ ಬಳಿ ಈ ದಾಳಿ ನಡೆದಿದ್ದು, ನಗರದ ಮಧ್ಯಭಾಗದಲ್ಲಿ ಮುಗಿಲೆತ್ತರಕ್ಕೆ ಹೊಗೆ ಆವರಿಸಿತ್ತು. ದಾಳಿ ಸಂದರ್ಭದಲ್ಲಿ 86 ವರ್ಷದ ಖಮೇನಿ ತಮ್ಮ ಕಚೇರಿಗಳಲ್ಲಿ ಇದ್ದರೋ, ಇಲ್ಲವೋ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ಅಮೆರಿಕದೊಂದಿಗೆ ಉದ್ವಿಗ್ನತೆ ಹೆಚ್ಚಾದ ಬೆನ್ನಲ್ಲೇ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಪರಮಾಣು ಯೋಜನೆ ಸಂಬಂಧ ಇರಾನ್ ಮೇಲೆ ಒತ್ತಡ ಹೇರಲು ಮುಂದಾಗಿರುವ ಅಮೆರಿಕ, ಫೈಟರ್ ಜೆಟ್‌ಗಳು ಮತ್ತು ಯುದ್ಧನೌಕೆಗಳ ಬೃಹತ್ ಪಡೆಯನ್ನು ಸಜ್ಜುಗೊಳಿಸಿರುವ ಬೆನ್ನಲ್ಲೇ ಇಸ್ರೇಲ್ ಈ ದಾಳಿ ನಡೆಸಿದೆ.
ದಾಳಿ ಮಾಡುತ್ತಿರುವ ಬಗ್ಗೆ ಇಸ್ರೇಲ್ ತಿಳಿಸಿದ ಕೆಲ ಹೊತ್ತಲ್ಲೇ ಇರಾನ್ ರಾಜಧಾನಿಯಲ್ಲಿ ಹೆಚ್ಚಿನ ಸ್ಫೋಟಗಳು ಸಂಭವಿಸಿವೆ. ದಾಳಿಗಳಿಂದ ಯಾವುದೇ ಸಾವು-ನೋವು ಸಂಭವಿಸಿದ ಮಾಹಿತಿಯನ್ನು ಎರಡೂ ಕಡೆಯ ಅಧಿಕಾರಿಗಳು ಇನ್ನೂ ಹಂಚಿಕೊಂಡಿಲ್ಲ.

