ಬೆಂಗಳೂರು: ಜೈಲಿನಲ್ಲಿ ನಡೆಯುವ ಅಕ್ರಮಗಳಿಗೆ ಆಯಾ ಜೈಲಾಧಿಕಾರಿಗಳೇ ಹೊಣೆ ಎಂದು ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಜೈಲುಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿರುವ ಅವರು, ಇನ್ಮುಂದೆ ಜೈಲಿನಲ್ಲಿ ಅಕ್ರಮಗಳು ನಡೆದರೆ, ಆಯಾ ಜೈಲಾಧಿಕಾರಿಗಳನ್ನೆ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಐಷಾರಾಮಿ ವ್ಯವಸ್ಥೆ ಕಲ್ಪಿಸಿದ ಪ್ರಕರಣದ ನಂತರ ಅಲ್ಲಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ವರದಿಯಾಗುತ್ತಲೇ ಇದೆ. ಹೀಗಾಗಿ, ಅಲೋಕ್ ಕುಮಾರ್ ಅವರನ್ನು ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ನೇಮಕ ಮಾಡಲಾಗಿದೆ.
ಅಲೋಕ್ ಕುಮಾರ್ ಡಿಜಿಪಿಯಾಗಿ ಬಂದ ನಂತರ ರಾಜ್ಯದ ಎಲ್ಲ ಪ್ರಮುಖ ಜೈಲುಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಅಕ್ರಮಗಳನ್ನು ಪತ್ತೆಹಚ್ಚುವ ಮೂಲಕ ಅವುಗಳನ್ನು ಸರಿಪಡಿಸುವ ಕೆಲಸ ಮಾಡಿದ್ದಾರೆ. ಈ ನಡುವೆ ಮುಂದೆ ನಡೆಯುವ ಅಕ್ರಮಗಳಿಗೆ ಜೈಲಾಧಿಕಾರಿಗಳನ್ನೇ ಹೊಣೆಯಾಗಿಸುವ ಮೂಲಕ ಕ್ರಮಕ್ಕೆ ಮುಂದಾಗಿದ್ದಾರೆ.

