ಮಥುರಾ: TATA IPL ಬಗ್ಗೆ ಇಡೀ ದೇಶ ತಲೆ ಕೆಡಿಸಿಕೊಂಡಿದೆ. ಇಂತಹದ್ದೇ ಒಂದು ಲೀಗ್ ಆಯೋಜನೆ ಮೂಲಕ ಮಥುರಾ ಜೈಲು ಇದೀಗ ಸುದ್ದಿಯಾಗಿದೆ.
ಮಥುರಾ ಜೈಲಿನಲ್ಲಿ IPL ಮಾದರಿಯಲ್ಲಿ ಜೈಲ್ ಪ್ರೀಮಿಯರ್ ಲೀಗ್ ಆಯೋಜನೆ ಮಾಡಲಾಗಿದೆ. ಏಪ್ರಿಲ್ ನಿಂದಲೇ ಜೈಲಿನಲ್ಲಿ ಪಂದ್ಯಾವಳಿ ನಡೆಸಲಾಗುತ್ತಿದೆ. ವಿವಿಧ ಬ್ಯಾರಕ್ ಗಳಿಂದ ಎಂಟು ತಂಡಗಳನ್ನು ಪಂದ್ಯಾವಳಿಯಲ್ಲಿ ಆಡಿಸಲಾಗುತ್ತಿದೆ.
ಕೈದಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ದೃಷ್ಟಿಯಿಂದ ಇಂತಹದ್ದೊಂದು ಆಲೋಚನೆ ಮಾಡಲಾಗಿದೆ. ಕ್ರೀಡೆ ಎಂಬುದು ಮನುಷ್ಯನ ಆಲೋಚನೆಯ ದಿಕ್ಕು ಬದಲಾಯಿಸುತ್ತದೆ. ಇಲ್ಲಿರುವ ಕೈದಿಗಳಲ್ಲಿ ಅಂತಹ ಬದಲಾವಣೆಯಾದರೆ, ಸಮಾಜದಲ್ಲಿ ಒಂದಷ್ಟು ಶಾಂತಿ ಸಾಧ್ಯ ಎಂದು ಜೈಲಾಧಿಕಾರಿ ಅಭಿಪ್ರಾಯ ಪಟ್ಟಿದ್ದಾರೆ.
ಪಂದ್ಯಾವಳಿಯಲ್ಲಿ ಎಂಟು ತಂಡಗಳನ್ನು ಎರಡು ಗುಂಪುಗಳಲ್ಲಿ ವಿಭಾಗಿಸಿ ಸೆಮಿಫೈನಲ್ ಸೇರಿ 12 ಪಂದ್ಯಗಳನ್ನು ನಡೆಸಲಾಗಿದೆ. ಫೈನಲ್ ಪಂದ್ಯದಲ್ಲಿ ಕ್ಯಾಪಿಟಲ್ಸ್ ಮತ್ತು ನೈಡ್ ರೈಡರ್ಸ್ ಹೆಸರಿನ ತಂಡಗಳು ಸೆಣಸಾಟ ನಡೆಸಿದ್ದು, ನೈಡ್ ರೈಡರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ ಎಂದು ವರದಿಯಾಗಿದೆ.
ಅಂತಿಮವಾಗಿ ಗೆದ್ದ ತಂಡ ಹಾಗೂ ಪ್ಲೇಯರ್ ಆಫ್ ದಿ ಮ್ಯಾಚ್, ಪ್ಲೇಯರ್ ಆಫ್ ದಿ ಸಿರೀಸ್ ಹಾಗೂ ಪರ್ಪಲ್ ಕ್ಯಾಪ್, ಆರೇಂಜ್ ಕ್ಯಾಪ್ ಬಹುಮಾನಗಳನ್ನು ಸಹ ನೀಡಲಾಗಿದೆ.