ಬೆಂಗಳೂರು: ತಿಕ್ಕತಿಕ್ಕಲು ಮಾತುಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿರುವ ಮಹಿಳಾ ಅಭಿಮಾನಿಯೊಬ್ಬರ ಮೇಲೆ ಜೆಡಿಎಸ್ ದೂರು ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದೆ.
ದರ್ಶನ್ ಅಭಿಮಾನಿ ಎಂದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವ ಮಹಿಳಾ ಅಭಿಮಾನಿಯೊಬ್ಬರು, ದರ್ಶನ್ ಕೊಲೆ ಕೇಸಲ್ಲಿ ಬಂಧನವಾಗಿದ್ದರೂ, ಅವರ ಬಗ್ಗೆ ಯಾರೂ ಏನೂ ಮಾತನಾಡಲೇ ಬಾರದು ಎಂಬರ್ಥದಲ್ಲಿ ವಿಡಿಯೋ ಮಾಡುತ್ತಿದ್ದಾರೆ. ದರ್ಶನ್ ವಿರುದ್ಧ ನಡೆಯುತ್ತಿರುವ ಎಲ್ಲ ತನಿಖೆ, ಆರೋಪಗಳೆಲ್ಲವೂ ಸುಳ್ಳೇ ಎಂಬಂತೆ ಬಿಂಭಿಸುತ್ತಿದ್ದಾರೆ. ಈ ಮಹಿಳೆ ಮಾಧ್ಯಮಗಳು ಮತ್ತು ಜೆಡಿಎಸ್ ನಾಯಕರನ್ನು ನಿಂದಿಸಿ ವಿಡಿಯೋ ಮಾಡಿದ್ದರು.
ವಿಡಿಯೋವೊಂದನ್ನು ಮಾಡಿ, ಅದರಲ್ಲಿ ಕುಮಾರಸ್ವಾಮಿ ಅವರನ್ನು ಬಾಯಿಗೆ ಬಂದಂತೆ ನಿಂದಿಸಿರುವ ದರ್ಶನ್ ಮಹಿಳಾ ಅಭಿಮಾನಿ, ಕುಮಾರಸ್ವಾಮಿ ಅವರ ದ್ವೇಷದಿಂದಲೇ ನಮ್ಮ ಡಿ ಬಾಸ್ ಗೆ ಇಂತಹ ಸ್ಥಿತಿ ಬಂದಿದೆ ಎಂದು ಹೇಳಿಕೊಂಡಿದ್ದರು. ಜತೆಗೆ ಸಿಕ್ಕಸಿಕ್ಕವರನ್ನೆಲ್ಲ ಬಾಯಿಗೆ ಬಂದಂತೆ ಬೈಯ್ಯುವುದನ್ನೇ ರೂಢಿ ಮಾಡಿಕೊಂಡಿದ್ದಾರೆ.
ಮಂಗಳಾ ಎಂಬ ಅಭಿಮಾನಿಯ ಈ ಅತಿರೇಕದ ವರ್ತನೆಯಿಂದ ಬೇಸತ್ತ ಜೆಡಿಎಸ್ ಕಾರ್ಯಕರ್ತರು ಆಕೆಯ ಮೇಲೆ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕೀರಾಮ್ ಅವರಿಂದ ದೂರು ಸಲ್ಲಿಕೆಯಾಗಿದ್ದು, ಆಕೆಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ದರ್ಶನ್ ಅಭಿಮಾನಿಗಳು ಎಂದುಕೊಳ್ಳುವವರು ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದಂತೆ ಬೈಯ್ಯುವುದು ಮತ್ತು ಬೆದರಿಕೆ ಹಾಕುವುದು ಹೆಚ್ಚಾಗುತ್ತಿದೆ. ದರ್ಶನ್ ಪ್ರಕರಣದ ಬಗ್ಗೆ ಕಠಿಣವಾಗಿ ಮಾತನಾಡುವ ಎಲ್ಲರಿಗೂ ಬೆದರಿಕೆ ಕರೆಗಳು ಬರುತ್ತಿವೆ. ಜತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ, ತೇಜೋವಧೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಆಕೆಯ ಮೇಲೆ ದೂರು ದಾಖಲಾಗಿರುವುದು ಇಂತಹದ್ದಕ್ಕೆಲ್ಲ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
