ಉಪಯುಕ್ತ ಸುದ್ದಿ

ಬ್ಯಾಂಕ್ ಆಫ್ ಬರೋಡಾದಲ್ಲಿ 2026ರ ನೇಮಕಾತಿ: 419 ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Share It

ಸರ್ಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡಾ (BOB) ಮಹತ್ವದ ಅವಕಾಶವನ್ನು ನೀಡಿದೆ. 2026ರ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿರುವ ಬ್ಯಾಂಕ್, ತನ್ನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹಿರಿಯ ವ್ಯವಸ್ಥಾಪಕ, ಉಪ ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ ಹಾಗೂ ಸಹಾಯಕ ಉಪಾಧ್ಯಕ್ಷ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ನಿಯಮಿತ ಹಾಗೂ ಒಪ್ಪಂದ ಆಧಾರದ ಮೇಲೆ ನಡೆಯಲಿದೆ.

ಒಟ್ಟು 419 ಹುದ್ದೆಗಳಿದ್ದು, ಸಂಬಂಧಿತ ವಿಷಯದಲ್ಲಿ ಪದವಿ ಪಡೆದವರು ಹಾಗೂ MBA, PGDM, CA, CFA, CMA ಮುಂತಾದ ವೃತ್ತಿಪರ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಲು ಅವಕಾಶವಿದೆ. ಜೊತೆಗೆ, ಆಯಾ ಹುದ್ದೆಗೆ ಅನುಗುಣವಾಗಿ ಅಗತ್ಯ ಅನುಭವವನ್ನೂ ಅಭ್ಯರ್ಥಿಗಳು ಹೊಂದಿರಬೇಕಾಗಿದೆ. ವಯೋಮಿತಿ ಸಾಮಾನ್ಯವಾಗಿ 22 ರಿಂದ 40 ವರ್ಷಗಳವರೆಗೆ ನಿಗದಿಯಾಗಿದ್ದು, ಸರಕಾರದ ನಿಯಮಗಳ ಪ್ರಕಾರ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಹತ್ತು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆನ್‌ಲೈನ್ ಅರ್ಜಿ ಪ್ರಕ್ರಿಯೆ ಫೆಬ್ರವರಿ 6ರಿಂದ ಆರಂಭವಾಗಿದ್ದು, ಫೆಬ್ರವರಿ 26 ಕೊನೆಯ ದಿನಾಂಕವಾಗಿದೆ. ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ. 850 ಪಾವತಿಸಬೇಕಾಗುತ್ತದೆ. ಇನ್ನು ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ, ಇಎಸ್‌ಎಂ, ಡಿಇಎಸ್‌ಎಂ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ. 175 ಮಾತ್ರ ಶುಲ್ಕ ನಿಗದಿಪಡಿಸಲಾಗಿದೆ.

ಈ ನೇಮಕಾತಿಯ ವಿಶೇಷತೆ ಎಂದರೆ ಯಾವುದೇ ಲಿಖಿತ ಪರೀಕ್ಷೆ ಇಲ್ಲ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನೇರವಾಗಿ ಸಂದರ್ಶನದ ಮೂಲಕ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆ ಮತ್ತು ಅನುಭವದ ಆಧಾರದಲ್ಲಿ ಆಕರ್ಷಕ ವೇತನ ನೀಡಲಾಗುತ್ತಿದ್ದು, ಕೆಲ ಹುದ್ದೆಗಳಲ್ಲಿ ತಿಂಗಳಿಗೆ ಲಕ್ಷ ರೂ.ಗಳಷ್ಟು ಸಂಬಳ ಪಡೆಯುವ ಅವಕಾಶವಿದೆ.

ಒಟ್ಟಾರೆ, ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವ ಕನಸು ಹೊಂದಿರುವ ಅಭ್ಯರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡಾದ ಈ ನೇಮಕಾತಿ ಉತ್ತಮ ವೇದಿಕೆಯಾಗಿದ್ದು, ಅರ್ಹರು ಸಮಯಮಿತಿಯೊಳಗೆ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಬಳಸಿಕೊಳ್ಳುವುದು ಒಳಿತು.


Share It

You cannot copy content of this page