ನವದೆಹಲಿ: ಜಾತ್ರೆಯ ಖುಷಿಯಲ್ಲಿ ಜಾಯ್ ರೈಡ್ ಮಾಡುತ್ತಿದ್ದವರು ಇದ್ದಕ್ಕಿದ್ದಂತೆ ಮುರಿದು ಬಿದ್ದ ಯಂತ್ರದೊಳಗೆ ಸಿಲುಕಿ ನರಳುತ್ತಿದ್ದರು. ಅವರನ್ನು ಕಾಪಾಡಲು ಹೋದ ಪೊಲೀಸ್ ಅಧಿಕಾರಿಯೊಬ್ಬರು ತಲೆಗೆ ರೆಕ್ಕೆ ಬಡಿದು ಸಾವನ್ನಪ್ಪಿದ ಘಟನೆ ನಡೆದಿದೆ.
ಹರಿಯಾಣದ ಸೂರಜ್ ಗಂಝ್ ಜಾತ್ರಾ ಮಹೋತ್ಸವದಲ್ಲಿ ಈ ದುರ್ಘಟನೆ ನಡೆಸಿದ್ದು, ಪೊಲೀಸ್ ಇನ್ಸ್ ಪೆಕ್ಟರ್ ಸಾವನ್ನಪ್ಪಿದ್ದರೆ, 13ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಜೆ ಸುಮಾರು 6.15 ಕ್ಕೆ ಇದ್ದಕ್ಕಿದ್ದಂತೆ ಜಾತ್ರೆಯ ಜಾಯ್ ಪಾರ್ಕ್ ನಲ್ಲಿನ ಫೈರ್ ಗ್ರೌಂಡ್ ರೈಡ್ ನ ಸ್ವಿಂಗ್ ಹಳಿತಪ್ಪಿದ್ದು, ಜನರ ಮೇಲೆ ಅಡ್ಡಾದಿಡ್ಡಿ ನುಗ್ಗಿತ್ತು. ಸ್ಥಳದಲ್ಲಿಯೇ ಇದ್ದ ಪೊಲೀಸ್ ಅಧಿಕಾರಿ ಅದರ ನಡುವೆ ಸಿಲುಕಿದವರನ್ನು ಕಾಪಾಡುವ ಪ್ರಯತ್ನ ನಡೆಸಿದರು. ಈ ಪ್ರಯತ್ನದಲ್ಲಿ ಅವರ ತಲೆಗೆ ಬಲವಾದ ಪೆಟ್ಟು ಬಿದ್ದು, ಆಸ್ಪತ್ರೆಗೆ ಸಾಗಿಸುವಾಗ ಅವರು ಅಸುನೀಗಿದರು ಎಂದು ವರದಿಗಳು ತಿಳಿಸಿವೆ.
ಘಟನೆಯಲ್ಲಿ 13 ಹೆಚ್ಚು ಜನರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜಾಯ್ ರೈಡ್ ಮಾಲೀಕರ ಮೇಲೆ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

