ನಿಗಮದ ಎಸ್ ಸಿ-ಎಸ್ ಟಿ ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಹಾಗೂ ನಿಗಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಸಂಘದ ಸಹಯೋಗದೊಂದಿಗೆ ಜೂ. 6ರಂದು ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಹಮ್ಮಿಕೊಳ್ಳಲಾಗಿದೆ.
ಅಂದು ಮಧ್ಯಾಹ್ನ 3 ಗಂಟೆಗೆ ರೇಸ್ ಕೋರ್ಸ್ ಸಮೀಪದ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಇಂಧನ ಇಲಾಖೆ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೂ ಆಗಿರುವ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತಾ ಅವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಖ್ಯಾತ ಚಿಂತಕ ಡಾ. ಅನುಪಮ ಎಚ್.ಎಸ್. ಕವಲಕ್ಕಿ, ಹಂಪಿ ವಿವಿ ಇತಿಹಾಸ ವಿಭಾಗದ ಪ್ರೊಫೆಸರ್ ಡಾ.ಎನ್. ಚಿನ್ನಸ್ವಾಮಿ ಸೋಸಲೆ ಭಾಗವಹಿಸುವರು. ಕೆಪಿಸಿಎಲ್ ಮಾನವ ಸಂಪನ್ಮೂಲ ನಿರ್ದೇಶಕ ನಾಗರಾಜ ಸಿ., ಹಣಕಾಸು ನಿರ್ದೇಶಕ ಆರ್.ನಾಗರಾಜ, ತಾಂತ್ರಿಕ ನಿರ್ದೇಶಕ ಸಿ.ಎಂ.ದಿವಾಕರ್ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಪಡೆದ ಕೆಪಿಸಿಎಲ್ ನ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಿಬ್ಬಂದಿ ಮಕ್ಕಳಿಗೆ ಚಿನ್ನದ ಪದಕದೊಂದಿಗೆ ಪುರಸ್ಕರಿಸಲಾಗುವುದು. ಕಾರ್ಯಕ್ರಮಕ್ಕೂ ಮುನ್ನ ಮಧ್ಯಾಹ್ನ 1 ರಿಂದ 3ರವರೆಗೆ ಭೂಮ್ತಾಯಿ ಬಳಗದ ಡಿ.ಆರ್.ನಿರ್ಮಲ ಮತ್ತು ಸಂಗಡಿಗರಿಂದ ಹೋರಾಟ ಗೀತೆಗಳ ಗಾಯನ ನಡೆಯಲಿದೆ ಎಂದು ಕೆಪಿಸಿಎಲ್ ಪ್ರಕಟಣೆ ತಿಳಿಸಿದೆ.

