ಕಡೂರು: ಪಟ್ಟಣದಿಂದ ಎಮ್ಮೆದೊಡ್ಡಿಗೆ ತೆರಳುವ ರಸ್ತೆಯ ಕೆ.ಹೊಸಳ್ಳಿಯಲ್ಲಿ ಖಾಸಗಿಯವರ ಪಾಲಾಗಿದ್ದ ಕೋಟ್ಯಾಂತರ ಬೆಲೆ ಬಾಳುವ ಜಾಗವನ್ನು ಪುರಸಭೆಯು ತನ್ನ ವಶಕ್ಕೆ ಶುಕ್ರವಾರ ನಡೆಸಿದ ಕಾರ್ಯಾಚರಣೆ ಮೂಲಕ ಪಡೆಯುವಲ್ಲಿ ಯಶಸ್ವಿಯಾಗಿದೆ.
ಎಮ್ಮೆದೊಡ್ಡಿ ರಸ್ತೆಯಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಅಸೆಸ್‌ಮೆಂಟ್ ಸಂಖ್ಯೆ 816/767 ರಲ್ಲಿ ಅಂದಾಜು 22,500 ಅಡಿ ವಿಸ್ತೀರ್ಣದ ಜಾಗವನ್ನು ಕಳೆದ ಎರಡು ವರ್ಷದಿಂದ ಈಚೆಗೆ ಕೆಲವು ಖಾಸಗಿ ವ್ಯಕ್ತಿಗಳು ಕಾಂಪೌಂಡ್ ಹಾಕಿಕೊಂಡಿದ್ದನ್ನು ಗಮನಿಸಿ ಪುರಸಭೆ ಶುಕ್ರವಾರ ಬೆಳಗ್ಗೆ ಜೆಸಿಬಿ ಯಂತ್ರಗಳು, ಕ್ರೇನ್ ಸಹಾಯದ ಮೂಲಕ ತೆರವುಗೊಳಿಸುವ ಕೆಲಸ ಮಾಡಿತು.
ಸುಮಾರು 4.50 ಕೋಟಿಗೂ ಹೆಚ್ಚು ಬೆಲೆ ಬಾಳುವ ಈ ಜಾಗಕ್ಕೆ ಅಲ್ಲೇ ಇರುವ ಕಲ್ಯಾಣ ಮಂಟಪದ ಪದಾಧಿಕಾರಿಗಳು ಸಿಮೆಂಟ್ ಕಾಂಪೌಂಡ್ ನಿರ್ಮಿಸಿ ಕಬಳಿಸುವ ಹುನ್ನಾರ ನಡೆಸಿದ್ದು ಇದಕ್ಕೆ ಸ್ಥಳೀಯ ಪುರಸಭಾ ಸದಸ್ಯರು ಸೇರಿ ಹಲವರ ಕೈವಾಡ ಇರಬಹುದು ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಸಮಯದಲ್ಲಿ ಕಲ್ಯಾಣ ಮಂಟಪದ ಪದಾಧಿಕಾರಿಗಳು, ಕೆ.ಹೊಸಳ್ಳಿ ಗ್ರಾಮಸ್ಥರು ಮತ್ತು ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದು ಕಡೆಗೆ ಪದಾಧಿಕಾರಿಗಳು ಒಂದು ವಾರ ಕಾಲಾವಕಾಶ ಕೊಡಿ, ನಾವೇ ತೆರವು ಮಾಡುತ್ತೇವೆ ಎಂದಾಗ ಇದಕ್ಕೆ ಒಪ್ಪದ ಪುರಸಭೆ ಅಧಿಕಾರಿಗಳು ಜೆಸಿಬಿಗಳ ಮೂಲಕ ತೆರವು ಕಾರ್ಯಾಚರಣೆ ಆರಂಭಿಸಿದರು.
ಸದರಿ ವಶಪಡಿಸಿಕೊಂಡ ಜಾಗದಲ್ಲಿ ಉದ್ಯಾನವನ ಮತ್ತು ಮೇಲ್ಮಟ್ಟದ ನೀರಿನ ಸಂಗ್ರಹಣಾ ಟ್ಯಾಂಕ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ಪಟ್ಟಣವು ದಿನೇದಿನೇ ಬೆಳೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಈಗಲೇ ಎಚ್ಚರ ವಹಿಸಿ ನೀರಿನ ಮೇಲ್ಮಟ್ಟದ ಸಂಗ್ರಹಣಾ ಟ್ಯಾಂಕ್ ನಿರ್ಮಾಣ ಅನಿವಾರ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಪಿಎಸೈಗಳಾದ ಪವನಕುಮಾರ್, ಪವಿತ್ರ ಮತ್ತು ಪೋಲೀಸ್ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಇದ್ದರು.

