ರಾಜಕೀಯ ಸುದ್ದಿ

ವಿಳಂಬವಾದ ಕಗ್ಗದಾಸನಪುರ ಕೆರೆ ಅಭಿವೃದ್ಧಿ: ಡಿಸೆಂಬರ್ ವೇಳೆಗೆ ಕೆರೆ ಅನಾವರಣ

Share It

ಬೆಂಗಳೂರು: ನ್ಯಾಯಾಲಯದ ತಡೆ ಮತ್ತು ಕಿರಿದಾದ ರಸ್ತೆಗಳಲ್ಲಿ ಬೃಹತ್ ವಾಹನಗಳು ಸಾಧ್ಯವಾಗದಿದ್ದರಿಂದ ಕಗ್ಗದಾಸನಪುರ ಕೆರೆ ಅಭಿವೃದ್ಧಿ ತಡವಾಗಿದೆ. ಆದರೆ ಡಿಸೆಂಬರ್ ವೇಳೆಗೆ ಕಗ್ಗದಾಸನಪುರ ಕೆರೆ ಅಭಿವೃದ್ಧಿ ಪೂರ್ಣಗೊಳ್ಳಲಿದೆ ಎಂದು ಸಿ.ವಿ.ರಾಮನ್ ನಗರ ಕ್ಷೇತ್ರದ ಶಾಸಕ ಎಸ್.ರಘು ತಿಳಿಸಿದ್ದಾರೆ.

ಕಗ್ಗದಾಸನಪುರ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕ ಎಸ್.ರಘು ಅವರು, ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಮುಗಿಸುವಂತೆ ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಅಧಿಕಾರಿಗಳು ಡಿಸೆಂಬರ್ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಶಾಸಕರಿಗೆ ಭರವಸೆ ನೀಡಿದರು.

‘ಕಗ್ಗದಾಸಪುರ ಕೆರೆ ಅಭಿವೃದ್ಧಿ ಕಾಮಗಾರಿಗೆ 2019 ರ ಅಂತ್ಯದಲ್ಲಿ ಕಾರ್ಯಾದೇಶ ನೀಡಿದ ಮೇಲೆ ನ್ಯಾಯಾಲಯ ತಡೆ ನೀಡಿತ್ತು. ಬಳಿಕ ಕೊರೊನಾ ವೈರಸ್ ಅಲೆಯ ಕಾರಣ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ. ನಂತರ 2022 ರಲ್ಲಿ ಅತಿ ಹೆಚ್ಚಿನ ಮಳೆ ಸುರಿದ ಹಿನ್ನೆಲೆಯಲ್ಲಿ ಮತ್ತೆ ಯಾವುದೇ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕಗ್ಗದಾಸನಪುರ ಕೆರೆ ಅಭಿವೃದ್ಧಿ ಕಾಮಗಾರಿ ವಿಳಂಬವಾಗಿತ್ತು. ಈ ಕಾಮಗಾರಿಗೆ ಹೆಚ್ಚಿನ ಅನುದಾನವೂ ಬಿಡುಗಡೆಯಾಗಿಲ್ಲ. ಆಗಿರುವ ಕೆಲಸಕ್ಕೆ ಟೆಂಡರ್ ನಲ್ಲಿ ನಮೂದಿಸಿರುವ ಹಣವನ್ನಷ್ಟೇ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಕೆರೆ ವಿಭಾಗದ ಇಂಜಿನಿಯರ್ ‌ಗಳು ಮಾಹಿತಿ ನೀಡಿದ್ದಾರೆ.

“47 ಎಕರೆ ವಿಸ್ತೀರ್ಣದ ಕಗ್ಗದಾಸನಪುರ ಕೆರೆಗೆ 8 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇನ್ನಷ್ಟು ಅಭಿವೃದ್ಧಿಗೆ ಇದೀಗ 4 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಚ್ಚುವರಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ” ಎಂದು ಬಿಬಿಎಂಪಿ ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ತಿಳಿಸಿದ್ದಾರೆ.

ಎಸ್.ಟಿ.ಪಿ ವಿಳಂಬ…
ಕಗ್ಗದಾಸನಪುರ ಕೆರೆಗೆ ಸಂಸ್ಕರಿತ ನೀರನ್ನು ಮಾತ್ರ ಬಿಡುಗಡೆಗೊಳಿಸಲು 5 ಎಂ.ಎಲ್.ಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ನಿರ್ಮಿಸಲಾಗುತ್ತಿದೆ. ಈ ಕಾಮಗಾರಿ ಡಿಸೆಂಬರ್ ಅಂತ್ಯದಲ್ಲಿ ಮುಗಿಯಲಿದೆ ಎಂದು ಬೆಂಗಳೂರು ಜಲಮಂಡಳಿ ಮುಖ್ಯ ಇಂಜಿನಿಯರ್ ಗಂಗಾಧರ್ ತಿಳಿಸಿದ್ದಾರೆ.

ಕಗ್ಗದಾಸನಪುರ ಕೆರೆಯ ಅಂಗಳದಲ್ಲಿ ಸುಮಾರು ಎರಡೂವರೆ ಎಕರೆ ಜಾಗವನ್ನು ಮೊದಲು ನಿಗದಿಪಡಿಸಿ ಎಸ್.ಟಿ.ಪಿ ನಿರ್ಮಿಸಲು ಕಾಮಗಾರಿಯನ್ನು ಆರಂಭಿಸಲಾಗಿತ್ತು. ಆದರೆ ನ್ಯಾಯಾಲಯದಿಂದ ಇದಕ್ಕೆ ಅನುಮತಿ ಸಿಗದಿದ್ದರಿಂದ ಆ ಪ್ರದೇಶದಿಂದ ಮತ್ತೊಂದು ಬದಿಗೆ ಎಸ್.ಟಿ.ಪಿ.ಯನ್ನು ಸ್ಥಳಾಂತರವಾಯಿತು. ಸದ್ಯ ಸಾಮರ್ಥ್ಯ ಕಡಿತಗೊಳಿಸದೆ ಎಸ್.ಟಿ.ಪಿ.ಯನ್ನು ನಿರ್ಮಿಸಲಾಗುತ್ತಿದೆ.

ಬೃಹತ್ ವಾಹನಗಳು ಇಲ್ಲಿಗೆ ಬರಲು ಸಾಧ್ಯವಿಲ್ಲ. ಹೀಗಾಗಿ ಕಾಮಗಾರಿ ಮತ್ತೆ ವಿಳಂಬವಾಗುತ್ತಿದೆ. ಇದು ಟರ್ನ್ ಕೀ ಯೋಜನೆಯಾಗಿದ್ದು, ಎಷ್ಟೇ ವಿಳಂಬವಾದರೂ 26 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತದೆ.‌ ಇದರಿಂದ ಜಿಎಸ್ಟಿ ಸೇರಿದಂತೆ 10 ವರ್ಷಗಳ ನಿರ್ವಹಣೆಯೂ ಗುತ್ತಿಗೆದಾರರದ್ದೇ ಆಗಿದೆ ಎಂದು ಜಲಮಂಡಳಿ ಮುಖ್ಯ ಇಂಜಿನಿಯರ್ ಗಂಗಾಧರ್ ತಿಳಿಸಿದ್ದಾರೆ.

162 ದಶಲಕ್ಷ ಲೀಟರ್ ಸಾಮರ್ಥ್ಯದ ಕಗ್ಗದಾಸನಪುರ ಕೆರೆ: ಕಗ್ಗದಾಸನಪುರ ಕೆರೆ ಅಭಿವೃದ್ಧಿ ಬಗ್ಗೆ ಅನಗತ್ಯವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಈ 47 ಎಕರೆ ದೊಡ್ಡ ಕೆರೆಯನ್ನು ಕಿರಿದಾದ ರಸ್ತೆಗಳ ನಡುವೆ ಅಭಿವೃದ್ಧಿ ಮಾಡುವುದೇ ಸವಾಲಾಗಿ ಪರಿಣಮಿಸಿದೆ. 67 ದಶಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯವನ್ನು 162 ದಶಲಕ್ಷ ಲೀಟರ್ ಗೆ ಹೆಚ್ಚಿಸಲಾಗಿದೆ. ಜೊತೆಗೆ ಎಲ್ಲಾ ರೀತಿಯ ಒತ್ತುವರಿಯನ್ನು ಸಹ ತೆರವುಗೊಳಿಸಲಾಗಿದ್ದು, ಸುಮಾರು ಒಂದು ಎಕರೆ ಪ್ರದೇಶದ ಒತ್ತುವರಿ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಶಾಸಕ ಎಸ್.ರಘು ತಿಳಿಸಿದ್ದಾರೆ.

ಕಗ್ಗದಾಸನಪುರ ಕೆರೆ ಅಭಿವೃದ್ಧಿ ವಿಳಂಬವಾಗಿದ್ದು, ಅನುದಾನ ಹಣ ದುರುಪಯೋಗವಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದವರು ದೂರಿದ್ದರು.
‘ಕೆರೆಯ ಸಾಮರ್ಥ್ಯ ಮತ್ತು ಕಾಮಗಾರಿಯನ್ನು ಪರಿಶೀಲಿಸಿದರೆ ಎಷ್ಟು ಹಣ ವ್ಯಯವಾಗಿದೆ ಎಂಬುದು ಎಲ್ಲರಿಗೂ ತಿಳಿಯಲಿದೆ ಎಂದು ಶಾಸಕ ಎಸ್.ರಘು ಹೇಳಿದ್ದಾರೆ.


Share It

You cannot copy content of this page