ಅಪರಾಧ ಸುದ್ದಿ

ಕುವೈತ್ ಬೆಂಕಿ ಅವಘಡ: ಕಲಬುರಗಿ ವ್ಯಕ್ತಿ ಸಾವು

Share It

ಕಲಬುರಗಿ: ಕುವೈತ್‌ನ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಜಿಲ್ಲೆಯ ಆಳಂದ ತಾಲ್ಲೂಕಿನ ಸರಸಂಬಾ ಗ್ರಾಮದ ವಿಜಯಕುಮಾ‌ರ್ ಪ್ರಸನ್ನ (40) ಸಾವನ್ನಪ್ಪಿದ್ದಾರೆ.

ಕಳೆದ 10 ವರ್ಷಗಳಿಂದ ವಿಜಯಕುಮಾರ್ ಅವರು ಕುವೈತ್‌ನಲ್ಲಿಯೇ ನೆಲೆಸಿದ್ದರು. ಅಲ್ಲಿ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಗ್ರಾಮಕ್ಕೆ ಬಂದು ಹೋಗಿದ್ದರು.

ಅವರಿಗೆ ಪತ್ನಿ, ಪುತ್ರಿ, ಇಬ್ಬರು ಪುತ್ರರಿದ್ದಾರೆ.

ಅಗ್ನಿ ಅವಘಡ ನಡೆದ ಸಂದರ್ಭದಲ್ಲಿ ಎರಡನೇ ಮಹಡಿಯಲ್ಲಿ ವಿಜಯಕುಮಾರ್ ಮಲಗಿದ್ದರು. ಹೀಗಾಗಿ, ಬೆಂಕಿಯ ಕೆನ್ನಾಲಿಗೆ ಚಾಚಿದ್ದರಿಂದ ಸಾವಿಗೀಡಾದರು. ಮೊದಲ ಮಹಡಿಯಲ್ಲಿದ್ದ ಆಳಂದ ತಾಲ್ಲೂಕಿನ ಜಿಡಗಾ ಗ್ರಾಮದ ಇಬ್ಬರು ಅಲ್ಲಿಂದ ಜಿಗಿದು ಜೀವ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಅವರೇ ಗ್ರಾಮಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದರು.

ವಿಜಯಕುಮಾರ್ ಪಾರ್ಥಿವ ಶರೀರ ಶುಕ್ರವಾರ ಕೇರಳದ ಕೊಚ್ಚಿಗೆ ಬರಲಿದ್ದು, ಅಲ್ಲಿಂದ ಶವವನ್ನು ಜಿಲ್ಲೆಗೆ ತರಲು ವ್ಯವಸ್ಥೆ ಮಾಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕೊಚ್ಚಿಯಿಂದ ಹೈದರಾಬಾದ್‌ಗೆ ವಿಮಾನದ ಮೂಲಕ ಹಾಗೂ ಅಲ್ಲಿಂದ ಆಂಬುಲೆನ್ಸ್‌ ಮೂಲಕ ಆಳಂದದ ಸರಸಂಬಾಕ್ಕೆ ತರಲಾಗುವುದು. ಇದಕ್ಕಾಗಿ ಆಳಂದ ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಸಿಪಿಐ ಕೊಚ್ಚಿಗೆ ತೆರಳಲಿದ್ದಾರೆ ಎಂದು ಪ್ರಿಯಾಂಕ್ ತಿಳಿಸಿದ್ದಾರೆ.


Share It

You cannot copy content of this page