ಬೆಂಗಳೂರು: ಕಮಲಹಾಸನ್ ನಟನೆಯ ಎಸ್ ಶಂಕರ್ ನಿರ್ದೇಶನದ ಇಂಡಿಯನ್ ಸಿನಿಮಾದ ಎರಡನೇ ಭಾಗ ಎರಡು ದಶಕಗಳ ನಂತರ ಇದೀಗ ಬಿಡುಗಡೆಗೆ ಸಜ್ಜಾಗಿದೆ.
ಇದೇ ಜುಲೈ 12 ಕ್ಕೆ ವಿಶ್ವಾದಾದ್ಯಂತ ಇಂಡಿಯನ್-2 ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಈಗಾಗಲೇ ಟೀಸರ್ ಮತ್ತು ಹಾಡಿನ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ಸಿನಿಮಾ ಹೆಚ್ಚಿನ ನಿರೀಕ್ಷೆಯನ್ನು ಮೂಡಿಸಿದೆ.
ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಕಮಲಹಾಸನ್ ಜತೆಗೆ, ಬೊಮ್ಮರಿಲ್ಲು ಖ್ಯಾತಿಯ ಸಿದ್ಧಾರ್ಥ್ ಹಾಗೂ ರಾಕುಲ್ ಪ್ರೀತ್ ಸಿಂಗ್, ಎಸ್.ಜೆ.ಸೂರ್ಯ, ಕಾಜಲ್ ಅಗರ್ವಾಲ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಂ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.
1996 ರಲ್ಲಿ ಇಂಡಿಯನ್ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಸೇನಾಪತಿ ಪಾತ್ರದಲ್ಲಿ ಕಮಲಹಾಸನ್ ಮಿಂಚಿದ್ದರು. ಅದರ ಮುಂದುವರಿದ ಭಾಗವೇ ಇಂಡಿಯನ್-2 ಸಿನಿಮಾ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕಮಲ್ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಕತೆಯಾಗಿದೆ.

