ಡಾರ್ಜಿಲಿಂಗ್: ಪಶ್ಚಿಮ ಬಂಗಾಳದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, ಸುಮಾರು15 ಜನರು ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಡಾರ್ಜಿಲಿಂಗ್ ಜಿಲ್ಲೆಯ ಸಿಲ್ಚಾರ್ನಿಂದ ಕಲ್ಕತ್ತಾಗೆ ತೆರಳುತ್ತಿದ್ದ ಕಾಂಚನಜುಂಗಾ ಎಕ್ಸ್ಪ್ರೆಸ್ ರೈಲಿಗೆ ನ್ಯೂ ಜಲ್ಪೈಗುರಿಗೆ ಸಮೀಪವಿರುವ ರಂಗಪಾಣಿ ನಿಲ್ದಾಣದ ಬಳಿ ಗೂಡ್ಸ್ ರೈಲು, ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಪ್ಯಾಸೆಂಜರ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದ್ದು, 15ಕ್ಕೂ ಹೆಚ್ಚು ಆಂಬ್ಯಲೆನ್ಸ್ಗಳು ಸ್ಥಳದಲ್ಲಿವೆ.
ಕಾಂಚನಜುಂಗಾ ಎಕ್ಸ್ಪ್ರೆಸ್ ಅಸ್ಸಾಂನ ಸಿಲ್ಚಾರ್ನಿಂದ ಕಲ್ಕತ್ತಾದ ಸೀಲ್ದಾ ಮಧ್ಯೆ ಚಲಿಸುತ್ತದೆ. ಸೀಲ್ದಾಹ್ಗೆ ಬರುತ್ತಿದ್ದ ವೇಳೆ ಇಂದು ಬೆಳಗ್ಗೆ 8.45ರ ಸುಮಾರಿಗೆ ನ್ಯೂ ಜಲ್ಪೈಗುರಿ ಜಂಕ್ಷನ್ ಮುಂದೆ ಕತಿಹಾರ್ ರೈಲ್ವೆ ವಿಭಾಗದ ರಂಗಪಾಣಿ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ ಎಂದು ಈಶಾನ್ಯ ಫ್ರಾಂಟಿಯರ್ ರೈಲ್ವೆ ಮಾಹಿತಿ ನೀಡಿದೆ.
ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಪ್ರತಿಕ್ರಿಯೆ ನೀಡಿದ್ದು, “ಎನ್ಎಫ್ಆರ್ ವಲಯದಲ್ಲಿ ದುರದೃಷ್ಟಕರ ಅಪಘಾತ ಸಂಭವಿಸಿದೆ. ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರೈಲ್ವೆ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಸಮನ್ವಯದಲ್ಲಿ ರಕ್ಷಣಾ ಕಾರ್ಯ ಮಾಡುತ್ತಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ” ಎಂದು ಹೇಳಿದ್ದಾರೆ.
ಸೀಲ್ದಾ ಪೂರ್ವ ರೈಲ್ವೇ ರಂಗಪಾಣಿ ನಿಲ್ದಾಣದಲ್ಲಿ ಕಂಟ್ರೋಲ್ ಡೆಸ್ಕ್ ಸ್ಥಾಪಿಸಿದೆ. ರೈಲಿನಲ್ಲಿ ಎರಡು ಪಾರ್ಸೆಲ್ ಹಾಗೂ ಒಂದು ಗಾರ್ಡ್ಗಾಗಿ ಕೋಚ್ ಇದೆ. ಗೂಡ್ಸ್ ಕಂಟೈನರ್ ರೈಲು ಸಿಗ್ನಲ್ ಮೀರಿ, ಕಾಂಚನಜುಂಗಾ ಎಕ್ಸ್ಪ್ರೆಸ್ನ ಹಿಂಭಾಗದ ಪಾರ್ಸೆಲ್ ಕೋಚ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

