ಅಪರಾಧ ಸುದ್ದಿ

ಕಾನ್ಪುರ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಅಪಘಾತ: ತಂಬಾಕು ಉದ್ಯಮಿ ಪುತ್ರ ಬಂಧನ

Share It

ಕಾನ್ಪುರ : ಕಾನ್ಪುರದಲ್ಲಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಅಪಘಾತಗೊಂಡು ಹಲವಾರು ಜನರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ತಂಬಾಕು ಉದ್ಯಮಿ ಪುತ್ರ ಶಿವಂ ಮಿಶ್ರಾನನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಂ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದರು. ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ 10 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಇಟಾಲಿಯನ್ ಐಷಾರಾಮಿ ಸ್ಪೋರ್ಟ್ಸ್ ಕಾರು ಲ್ಯಾಂಬೋರ್ಗಿನಿ ರೆವೆಲ್ಟೊ, ಗ್ವಾಲ್ಟೋಲಿ ಪ್ರದೇಶದಲ್ಲಿ ಪಾದಚಾರಿಗಳು ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದಿತ್ತು.

ಅಪಘಾತದಲ್ಲಿ ಗಾಯಗೊಂಡ ಇ-ರಿಕ್ಷಾ ಚಾಲಕ ಮೊಹಮ್ಮದ್ ತೌಫೀಕ್ (18) ಪೊಲೀಸರಿಗೆ ದೂರು ನೀಡಿದ್ದರು. ನಂತರ ಆರೋಪಿಗಳ ಪರ ವಕೀಲರು, ದೂರು ನೀಡಿರುವ ತೌಫೀಕ್ ಅವರು ಕಾನೂನು ಕ್ರಮ ಕೈಗೊಳ್ಳಲು ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದರು. ಬುಧವಾರ ಪ್ರಕರಣ ಹೊಸ ತಿರುವು ಪಡೆದುಕೊಂಡಿತು. ಕಾರಿನ ನಿಯೋಜಿತ ಚಾಲಕ ಎಂದು ಹೇಳಿಕೊಳ್ಳುವ ಮೋಹನ್ ಎಂಬ ವ್ಯಕ್ತಿ, ಅಪಘಾತದ ಸಮಯದಲ್ಲಿ ಶಿವಂ ಮಿಶ್ರಾ ಅಲ್ಲ, ತಾನೇ ಕಾರು ಚಲಾಯಿಸುತ್ತಿದ್ದೆ ಎಂದು ಹೇಳಿದ್ದಾರೆ.

ಆದರೆ, ಪೊಲೀಸರು ಈ ಹೇಳಿಕೆ ತಿರಸ್ಕರಿಸಿದ್ದು, ತನಿಖೆಯ ಸಮಯದಲ್ಲಿ ಸಂಗ್ರಹಿಸಲಾದ ಪುರಾವೆಗಳು ಶಿವಂ ಮಿಶ್ರಾ ಅವರೇ ಕಾರು ಚಾಲನೆ ಮಾಡುತ್ತಿದ್ದಾಗ ಪಾದಚಾರಿಗಳು ಮತ್ತು ಇತರ ವಾಹನಗಳಿಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಸ್ಪಷ್ಟವಾಗಿ ದೃಢಪಡಿಸಿವೆ ಎಂದು ತಿಳಿಸಿದ್ದಾರೆ.


Share It

You cannot copy content of this page