ಬೆಂಗಳೂರು: ಸಿಎಂ ಬದಲಾವಣೆ ಪ್ರಕ್ರಿಯೆ ಕೈಬಿಟ್ಟಿರುವ ಕಾಂಗ್ರೆಸ್ ಹೈಕಮಾಂಡ್ ಅರ್ಧದಷ್ಟು ಸಚಿವರಿಗೆ ಕೋಕ್ ಕೊಟ್ಟು ಹೊಸಮುಖಗಳಿಗೆ ಮಣೆ ಹಾಕಲು ತೀರ್ಮಾನಿಸಿದೆ.
ಹೀಗೊಂದು ಮಹತ್ವದ ಮಾಹಿತಿಯನ್ನು ವಿಧಾನರಿಷತ್ ಮುಖ್ಯಸಚೇತಕ ಸಲೀಂ ಅಹಮದ್ ನೀಡಿದ್ದಾರೆ. ಶೇ. ಅರ್ಧದಷ್ಟು ಸಚಿವರಿಗೆ ಹೈಕಮಾಂಡ್ ಕೋಕ್ ನೀಡಲಿದೆ. ಆ ಸ್ಥಾನಗಳಿಗೆ ಹೊಸಮುಖಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಸ್ಥಾನ ತೆರವು ಮಾಡುವ ಹಿರಿಯ ಸಚಿವರಿಗೆ ಪಕ್ಷ ಸಂಘಟನೆಯ ಮಹತ್ತರ ಹೊಣೆಗಾರಿಕೆಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
2028 ರ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಈ ಮಹತ್ವದ ತೀರ್ಮಾನ ಕೈಗೊಳ್ಳಲಿದೆ. ಈಗಾಗಲೇ ಅಧಿಕಾರ ಮಡೆಸಿರುವ ಹಿರಿಯರು ಪಕ್ಷವನ್ನು ಬಲಗೊಳಿಸಲು ಶ್ರಮಿಸಲಿದ್ದಾರೆ. ಜನವರಿ 15 ರ ನಂತರ ಕ್ಯಾಬಿನೆಟ್ ವಿಸ್ತರಣೆಯ ಮಹತ್ವದ ತೀರ್ಮಾನವನ್ನು ಹೈಕಮಾಂಡ್ ಮಾಡಲಿದೆ ಎಂದು ಹೇಳಿದ್ದಾರೆ.
ಸಲೀಂ ಅಹಮದ್ ಕೂಡ 2023 ರಲ್ಲಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದರೆ, ಸಿಕ್ಕಿರಲಿಲ್ಲ. ಹೀಗಾಗಿ, ಸಂಪುಟ ಪುನರಚನೆಯಲ್ಲಿ ಅವಕಾಶದ ನಿರೀಕ್ಷೆಯಲ್ಲಿ ಇದ್ದಾರೆ. ಕಿತ್ತೂರು ಕರ್ನಾಟಕದಿಂದ ಕಳೆದ ಇಪ್ಪತ್ತು ವರ್ಷದಲ್ಲಿ ಯಾವ ಮುಸ್ಲಿಂ ಸಚಿವರಾಗಿಲ್ಲ. ಹೀಗಾಗಿ, ನನಗೆ ಅವಕಾಶ ಸಿಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಆ ಮೂಲಕ ಕಿತ್ತೂರು ಕರ್ನಾಟಕ ಪ್ರಾದೇಶಿಕತೆ ಮತ್ತು ಸಮುದಾಯದ ಕಾರ್ಡ್ ಪ್ಲೇ ಮಾಡಿದ್ದಾರೆ.

