ಬೆಂಗಳೂರು: ಹಾಸನ ಸಮೀಪದ ಈಚನಹಳ್ಳಿಯಲ್ಲಿ ಮೇ 26 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ದೇವನಹಳ್ಳಿ ತಾಲ್ಲೂಕಿನ ಕಾರಹಳ್ಳಿ ಮತ್ತು ಹಂದರಹಳ್ಳಿ ಗ್ರಾಮದ ನಿವಾಸಿಗಳ ಕುಟುಂಬದ ಸದಸ್ಯರನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆಹೆಚ್. ಮುನಿಯಪ್ಪ ಅವರು ಭೇಟಿ ಮಾಡಿ ಮೃತಪಟ್ಟವರ ಕುಟುಂಬಗಳಿಗೆ ತಲಾ 50 ಸಾವಿರ ರೂಪಾಯಿಗಳ ಸಹಾಯ ನೀಡಿ ಸಾಂತ್ವನ ಹೇಳಿದರು.
ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿಕರೊಬ್ಬರನ್ನು ಭೇಟಿ ಮಾಡಿಕೊಂಡು ವಾಪಾಸ್ ಬರುವಾಗ ಹಾಸನ ಹೊರವಲಯದ ಈಚನಹಳ್ಳಿ ಬಳಿ ಕಾರು ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಮತ್ತು ಹೊಸಕೋಟೆ ತಾಲೂಕಿನ ಅಂದರಹಳ್ಳಿ ಗ್ರಾಮದ ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರಾ, ಬಾಲಕ ಚೇತನ್ ಹಾಗೂ ಕಾರಿನ ಚಾಲಕ ರಾಕೇಶ್ ಮೃತಪಟ್ಟಿದ್ದರು.
ಈ ಸಂದರ್ಭದಲ್ಲಿ ಸಚಿವ ಕೆಎಚ್ ಮುನಿಯಪ್ಪ ಅವರು ಮಾತನಾಡಿ, ಕಾರಹಳ್ಳಿಯ ಮೃತ ನಾರಾಯಣಪ್ಪ ಮತ್ತು ಸುನಂದಾ ಅವರುಗಳ ಮಕ್ಕಳು ಅನಾಥವಾಗಿದ್ದು ಅವರ ವಿಧ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ಸಹಕಾರ ಕೊಡಿಸುವುದರ ಜೊತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣಕಾಸು ನೆರವನ್ನು ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಕೊಡಿಸುವುದಾಗಿ ಸಚಿವರು ಭರವಸೆ ನೀಡಿದರು.
ದೆಹಲಿ ಪ್ರವಾಸದಲ್ಲಿ ಇದ್ದ ಕಾರಣ ಮೃತರ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಅಪಘಾತವಾದ ದಿನ ಹಾಸನ ಪೋಲಿಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಲ್ಲಿನ ಪ್ರಕ್ರಿಯೆಯಲ್ಲಿ ನಿಗಾವಹಿಸಲಾಗಿತ್ತು ಇದರಲ್ಲಿ ರಾಜಕೀಯ ಬೆರೆಸುವುದು ಬೇಡ, ಎಂದು ತಿಳಿಸಿದರು.
ಈ ವೇಳೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ (ಬಯಪ) ದ ಅಧ್ಯಕ್ಷ ಶಾಂತ ಕುಮಾರ್ ಅವರು ಮೃತ ಕುಟುಂಬದ ಸದಸ್ಯರಿಗೆ ಪ್ರತ್ಯೇಕ ತಲಾ 10 ಸಾವಿರ ರೂಪಾಯಿಗಳ ನೆರವು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಚನ್ನಹಳ್ಳಿ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಕಾರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಜಯರಾಂ, ಕೆಂಪಣ್ಣ ಮುಂತಾದವರು ಇದ್ದರು.

