ಉಪಯುಕ್ತ ಸುದ್ದಿ

ಹಾಲು ಉತ್ಪಾದಕರಿಗೆ 2 ರೂ. ಬೆಲೆ ಇಳಿಸಿ ಕೋಚಿಮುಲ್ ಶಾಕ್!

Share It

ಕೋಲಾರ : ಮೊದಲಿನಿಂದಲೂ ರೈತರಿಗೆ ತೊಂದರೆ ತಪ್ಪಿದ್ದಲ್ಲ. ಒಮ್ಮೆ ಮಳೆ ಕೈಕೊಟ್ಟರೆ, ಇನ್ನೊಮ್ಮೆ ಬೆಲೆ ಕೈಕೊಡುತ್ತದೆ. ಅದರಂತೆ ಇದೀಗ ಹಾಲು ಉತ್ಪಾದಕರಿಗೆ ಕೋಚಿಮುಲ್​ ಬಿಗ್ ಶಾಕ್ ನೀಡಿದೆ.

ಏಕೆಂದರೆ ಹಾಲು ಉತ್ಪಾದಕರಿಗೆ ದಿಢೀರನೆ ಲೀಟರಿಗೆ 2 ರೂಪಾಯಿ ಕಡಿತ ಮಾಡಿ ಕೋಚಿಮುಲ್ ಆಡಳಿತ ಮಂಡಳಿ ಆದೇಶಿಸಿದೆ. ಪ್ರತಿ ಲೀಟರ್ ಹಾಲಿನ ಮೇಲೆ 2 ರುಪಾಯಿ ಕಡಿತ ಮಾಡಿದ್ದು, ನಾಳೆ(ಜು.05) ಬೆಳಿಗ್ಗೆಯಿಂದ ಜಾರಿಗೆ ಬರುವಂತೆ ಕೋಚಿಮುಲ್ ಸೂಚಿಸಿದೆ.

ನಾಳೆಯಿಂದ ಪರಿಷ್ಕೃತ ದರ: ಈ ಮೊದಲು ಹಾಲು ಉತ್ಪಾದಕರಿಗೆ 33.40 ರೂ ನೀಡಲಾಗುತ್ತಿತ್ತು, ಆದರೆ, ನಾಳೆಯಿಂದ ಹಾಲು ಉತ್ಪಾದಕರಿಗೆ ಪರಿಷ್ಕೃತ ದರ ಲೀಟರ್​ಗೆ 31.40 ರೂ ನೀಡಲು ಆದೇಶಿಸಿದೆ. ಜನವರಿಯಲ್ಲಿ ಪ್ರತಿ ದಿನ ಕೋಚಿಮುಲ್​ಗೆ ಬರೋಬ್ಬರಿ 9.65 ಲಕ್ಷ ಲೀಟರ್ ಹಾಲು ಸಂಗ್ರಹವಾಗಿತ್ತು.

ಜೂನ್ ತಿಂಗಳಿನಿಂದ ಪ್ರತಿ ದಿನ ಕೋಚಿಮುಲ್​ಗೆ 12.37 ಲಕ್ಷ ಲೀಟರ್ ಹಾಲು ಸಂಗ್ರಹ ಹಿನ್ನೆಲೆ, ಕೋಲಾರ – ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಿಂದ 2.50 ಲಕ್ಷ ಲೀಟರ್​ನಷ್ಟು ಹಾಲು ಹೆಚ್ಚಳವಾಗಿತ್ತು. ಆದರೆ, ಹಾಲಿನ ಶೇಖರಣೆ ಹೆಚ್ಚಿಗೆ ಹಾಗೂ ಒಕ್ಕೂಟದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕೋಚಿಮುಲ್ ಈ ನಿರ್ಧಾರ ಕೈಗೊಂಡಿದ್ದು, ಕೋಚಿಮುಲ್ ನಿರ್ಧಾರದಿಂದ ರೈತರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಈಗಾಗಲೇ ಲೀಟರ್‌ಗೆ 4 ರೂ. ಹೆಚ್ಚಳ ಮಾಡಿ ಗ್ರಾಹಕರ ಜೇಬಿಗೂ ಕತ್ತರಿ ಹಾಕಲಾಗಿತ್ತು.

ಇನ್ನು ಇತ್ತೀಚೆಗಷ್ಟೇ ನಂದಿನಿ ಹಾಲಿನ ದರ ಹೆಚ್ಚಿಸಿ ಕರ್ನಾಟಕ ಹಾಲು ಮಹಾಮಂಡಳ ಕೆಎಂಎಫ್ ಮಹತ್ವದ ನಿರ್ಧಾರ ಕೈಗೊಂಡಿತ್ತು. ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್​​ಗೆ 50 ಎಂಎಲ್​​ ಹಾಲು ಹೆಚ್ಚುವರಿಯಾಗಿ ಸೇರಿಸಲಾಗುವುದು. ಈ ಹಿನ್ನಲೆ ಸದ್ಯ ಇರುವ ಲೀಟರ್ ಹಾಲಿಗೆ ಇರುವ 42 ರೂಪಾಯಿ ದರವನ್ನು 2 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಇದರ ಬೆನ್ನಲ್ಲೇ ಕೋಚಿಮುಲ್ ಹಾಲು ಉತ್ಪಾದಕರಿಗೆ ಬಿಗ್ ಶಾಕ್ ನೀಡಿದೆ.


Share It

You cannot copy content of this page