ಕೋಲ್ಕತ್ತಾ: ಕೇಂದ್ರ ಕೋಲ್ಕತ್ತಾದ ಫಾಲಟ್ಟಿ ಮಚುವಾ ಬಳಿಯ ಹೋಟೆಲೊಂದರಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದು, ಹಲವರನ್ನು ರಕ್ಷಿಸಲಾಗಿದೆ.
“ರಾತ್ರಿ ಸುಮಾರು 8.15ರ ಸುಮಾರಿಗೆ ಫಾಲಟ್ಟಿ ಮಚುವಾ ಪ್ರದೇಶದ ಬಳಿಯ ರಿತುರಾಜ್ ಹೋಟೆಲ್ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. 14 ಜನರ ಮೃತದೇಹಗಳನ್ನು ಹೊರೆತೆಗೆಯಲಾಗಿದೆ. ಹಲವು ಜನರನ್ನು ನಮ್ಮ ತಂಡ ರಕ್ಷಣೆ ಮಾಡಿದೆ” ಎಂದು ಕೋಲ್ಕತ್ತಾ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ವರ್ಮಾ ಮಾಧ್ಯಮಗಳಿಗೆ ತಿಳಿಸಿದರು.
”ಸದ್ಯ ಬೆಂಕಿ ಹತೋಟಿಯಲ್ಲಿದೆ. ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ತನಿಖೆಗಾಗಿ ವಿಶೇಷ ತಂಡವನ್ನು ಸಹ ರಚಿಸಲಾಗಿದೆ. ಬೆಂಕಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ” ಎಂದು ಅವರು ವಿವರಿಸಿದ್ದಾರೆ.
ಇದಕ್ಕೂ ಮುನ್ನ, ಬೆಂಕಿ ಅವಘಡ ಸಂಭವಿಸಿರುವುದು ತಿಳಿಯುತ್ತಿದ್ದಂತೆ ಕೇಂದ್ರ ಸಚಿವ ಮತ್ತು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಅವರು ರಾಜ್ಯ ಸರ್ಕಾರವು ತಕ್ಷಣವೇ ಸಂತ್ರಸ್ತರನ್ನು ರಕ್ಷಿಸುವಂತೆ ಒತ್ತಾಯಿಸಿದರು.