ಅಪರಾಧ ಉಪಯುಕ್ತ ಸುದ್ದಿ

ಕಡೂರು ಪುರಸಭೆಯಿಂದ ಪಟ್ಟಣದ ಹೃದಯ ಭಾಗದಲ್ಲಿದ್ದ ಕೋಟ್ಯಂತರ ರು. ಆಸ್ತಿ ಮರುವಶ

Share It

ಕಡೂರು : ಹಾಲಿ ಪುರಸಭೆ ಕಚೇರಿ ಪಕ್ಕದ ಪಟ್ಟಣದ ಹೃದಯಭಾಗದ ಕೋಟ್ಯಾಂತರ ಮೌಲ್ಯದ ತನ್ನ ಆಸ್ತಿಯನ್ನು ಪುರಸಭೆ ಗುರುವಾರ ಸತತ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಪುರಸಭೆ ಪಕ್ಕದಲ್ಲಿ 112*115 ಅಡಿ ಅಳತೆಯ, ಆಸ್ತಿ ಸಂಖ್ಯೆ: 6160/646/2ರಲ್ಲಿದ್ದ ಜಾಗವನ್ನು ಈವರೆಗೆ ಕೆಲ ಖಾಸಗಿ ವ್ಯಕ್ತಿಗಳು ಕಂದಾಯ ಪಾವತಿಸಿ ಇ-ಸ್ವತ್ತು ಪಡೆದು ಸ್ವಾಧೀನಕ್ಕೆ ಪಡೆದಿದ್ದು. ಇದು ಅಕ್ರಮ ಎಂದು ಪುರಸಭೆ ಧೃಢಪಡಿಸಿಕೊಂಡು ಇಂದು ಮುಂಜಾನೆ ಪೊಲೀಸರ ಸರ್ಪಗಾವಲಿನಲ್ಲಿ ತೆರವು ಕಾರ್ಯಾಚರಣೆ ನಡೆಸಿತು.

ಮುಖ್ಯಾಧಿಕಾರಿ ಎನ್. ಭಾಗ್ಯಮ್ಮ, ಕಂದಾಯ ವಿಭಾಗದ ಅಧಿಕಾರಿಗಳಾದ ಮಮತ, ಜಗದೀಶ್, ಇಂಜಿನಿಯರ್‌ಗಳಾದ ಶ್ರೇಯಸ್, ಜಗದೀಶ್ ಸೇರಿ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು. ಹಾಲಿ ವಾಸವಿದ್ದ ವ್ಯಕ್ತಿಗಳು ಮತ್ತು ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಪುರಸಭೆ ಕಚೇರಿಗೆ ಹೊಂದಿಕೊಂಡ ಆಸ್ತಿ ಸಂಖ್ಯೆ :6160/646/2ರಲ್ಲಿ 112*115 ಅಳತೆಯ ಒಟ್ಟು 12,880 ಚದರ ಅಡಿ ನಿವೇಶನ ಪೂರ್ವ ಕಾಲದಿಂದ ಪುರಸಭೆ ಸ್ವತ್ತಾಗಿದೆ. ಇದರಲ್ಲಿ ಖಾಸಗಿ ವ್ಯಕ್ತಿಗಳು ಶೆಡ್ ಮತ್ತು ಕಟ್ಟಡ ನಿರ್ಮಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು. ಮನೆ ನಿರ್ಮಿಸಿ ಬಾಡಿಗೆಗೂ ಕೂಡ ನೀಡಿದ್ದು ಈ ಬಗ್ಗೆ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಿದ್ದರ ಹಿನ್ನಲೆಯಲ್ಲಿ ಲೋಕಾಯುಕ್ತ ಮತ್ತು ಜಿಲ್ಲಾಧಿಕಾರಿ ಆದೇಶದ ಮೇರೆ ಕಾರ್ಯಾಚರಣೆ ನಡೆಸಿ ತೆರವು ಮಾಡಲಾಗಿದೆ ಎಂಬುದು ಮುಖ್ಯಾಧಿಕಾರಿ ಎನ್. ಭಾಗ್ಯಮ್ಮ ತಿಳಿಸಿದರು.

ಹಾಲಿ ಸ್ವಾಧೀನದಲ್ಲಿದ್ದೇವೆ ಎಂದು ಹೇಳಿಕೊಳ್ಳುವ ವ್ಯಕ್ತಿಗಳು ಇ-ಸ್ವತ್ತಿನ ದಾಖಲಾತಿ ತೋರಿಸುತ್ತಿಲ್ಲ. ಬದಲಿಗೆ ಬೇರೊಂದು ಆಸ್ತಿ ಸಂಖ್ಯೆ ಇ-ಸ್ವತ್ತನ್ನು ತೋರಿಸುತ್ತಿದ್ದಾರೆ. ಅವರು ತೋರಿಸುವ ಆಸ್ತಿ ಸಂಖ್ಯೆಗೂ ಪುರಸಭೆ ದಾಖಲಾತಿ ಸಂಖ್ಯೆಗೂ ತಾಳೆಯಾಗುತ್ತಿಲ್ಲ. ಹಲವು ಬಾರಿ ನೋಟಿಸ್ ನೀಡಲಾಗಿದೆ. ಆದರೂ ಅವರು ಗಣನೆಗೆ ತೆಗೆದುಕೊಂಡಿಲ್ಲ. ಲೋಕಾಯುಕ್ತ ನೋಟಿಸ್ ನೀಡಿದೆ. ಯಾವುದೇ ಒತ್ತಡವಿಲ್ಲದೆ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಇಂದಿನ ಕಾರ್ಯಚರಣೆ ನಡೆಸಲಾಗಿದೆ ಎಂದು ತಿಳಿಸಿದರು.

ಸ್ಥಳದಲ್ಲಿ ಸ್ವಾಧೀನದಲ್ಲಿದ್ದ ಕೆ.ಪಿ. ರಂಗನಾಥ್, ಗೋಪಿ ಮುಂತಾದವರು ಮಾತನಾಡುತ್ತ ಎಲ್ಲಾ ದಾಖಲೆಗಳನ್ನು ತೋರಿಸಿದರೂ ಪುರಸಭೆ ಏಕಾಏಕಿ ದೌರ್ಜನ್ಯದಿಂದ ತೆರವು ಮಾಡಿದೆ. ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಕವಡೆಕಾಸಿನ ಬೆಲೆ ಕೊಟ್ಟಿಲ್ಲ. ಲಕ್ಷಾಂತರ ಮೌಲ್ಯದ ತಮ್ಮ ಆಸ್ತಿ ಹಾನಿಗೊಳಗಾಗಿದೆ. ಇದಕ್ಕೆ ಪರಿಹಾರ ಕೊಡುವವರು ಯಾರು? ಪುರಸಭೆ ಅಧಿಕಾರಿಗಳ ವಿರುದ್ದ ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸುತ್ತೇವೆ ಎಂದರು.

ಕಾರ್ಯಾಚರಣೆ ಪುರಸಭೆಯಿಂದ ಹೊಸ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಿದ್ದು. ಬೆಳಗ್ಗೆ 6 ಗಂಟೆಯಿಂದ ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟು ಜನರನ್ನು ಮತ್ತು ವಾಹನಗಳನ್ನು ತಹಬದಿಗೆ ತರುವಲ್ಲಿ ಹೈರಾಣಾದರು. ಪಿಎಸೈ ಎಂ.ಆರ್. ಧನಂಜಯ್ ನೇತೃತ್ವದಲ್ಲಿ ಪಿಎಸೈಗಳಾದ ಪವನ್‌ಕುಮಾರ್, ಕಿರಣ್‌ಕುಮಾರ್ ಹಾಗೂ ಸಿಬ್ಬಂದಿ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾದರು.


Share It

You cannot copy content of this page