ರಾಜಕೀಯ ಸುದ್ದಿ

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ-ಹೆಚ್ಚುವರಿ ಡಿಸಿಎಂ ಒತ್ತಾಯದ ಹಿಂದಿದೆ ಕಾಲೆಳೆಯುವ ರಾಜಕೀಯ!

Share It

ಬೆಂಗಳೂರು : ಹೆಚ್ಚುವರಿ ಡಿಸಿಎಂಗಳ ನೇಮಕಕ್ಕೆ ಕಾಂಗ್ರೆಸ್​​​​ನಲ್ಲಿ ತೀವ್ರ ಒತ್ತಾಯ ಅತಿಯಾಗಿ ಗದ್ದಲ, ಗೊಂದಲ ಎಲ್ಲವನ್ನೂ ಎಬ್ಬಿಸುತ್ತಿದೆ. ಒಂದು ವರ್ಗ ಡಿಸಿಎಂ ಸ್ಥಾನಕ್ಕೆ ಆಗ್ರಹಿಸುತ್ತಿದ್ದರೆ ಮತ್ತೊಂದು ವರ್ಗ ಡಿಸಿಎಂ ಸ್ಥಾನಕ್ಕೆ ಯಾವುದೇ ಕಂಟಕ ಬಾರದಂತೆ ತಂತ್ರಗಾರಿಕೆ ಮಾಡುತ್ತಿದೆ.

ಲೋಕಸಭೆ ಚುನಾವಣೆಗೆ ಮೊದಲು ಹೆಚ್ಚುವರಿ ಡಿಸಿಎಂ ಬೇಕೇಬೇಕು ಎಂಬ ಆಗ್ರಹದ ಹಿಂದೆ ಸಮುದಾಯಗಳನ್ನು ಸೆಳೆಯುವ ಲೆಕ್ಕಾಚಾರಗಳಿತ್ತು. ಆದರೆ ಲೋಕಸಭಾ ಚುನಾವಣೆ ಮುಗಿದ ಮೇಲೂ ಹೀಗೆ ಧ್ವನಿ ಎತ್ತಿದವರ ಹಿಂದೆ ಬೇರೆಯದೇ ಲೆಕ್ಕಾಚಾರಗಳಿವೆ. ಹೀಗಾಗಿ ಹೆಚ್ಚುವರಿ ಡಿಸಿಎಂಗಳ ನೇಮಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದೆ ಪ್ರಸ್ತಾಪಿಸಲು ರಾಜ್ಯ ಕೈ ನಾಯಕರಿಂದ ಸಿದ್ಧತೆ ನಡೆಯುತ್ತಿದೆ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಇದು ಸೂಕ್ತ ಸಮಯ ಎನ್ನುತ್ತಿರುವ ಹಲವು ಕೈ ನಾಯಕರು, 3 ಹೆಚ್ಚುವರಿ ಡಿಸಿಎಂಗಳ ಬೇಡಿಕೆಗೆ ಹಿಂದಿನ ಅಸಲಿಯತ್ತೇ ಕೆಪಿಸಿಸಿ ಅಧ್ಯಕ್ಷಗಿರಿ ಬದಲಾವಣೆ ಎನ್ನುತ್ತಿದ್ದಾರೆ.‌ ಸಮುದಾಯವಾರು ಡಿಸಿಎಂ ಹುದ್ದೆ ಸೃಷ್ಟಿಸಿ ಎನ್ನುತ್ತಿರುವ ನಾಯಕರು, ಹೆಚ್ಚು ಡಿಸಿಎಂ ಕೇಳಿದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿದೆ ಎಂಬ ಲೆಕ್ಕಾಚಾರ ಇಟ್ಟುಕೊಂಡಿದ್ದಾರೆ.

ಈ ವರ್ಷದ ಅಂತ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಅಷ್ಟರಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು ಎಂದು ನಾಯಕರು ಪಟ್ಟು ಹಿಡಿದಿದ್ದಾರೆ. ಒನ್ ಮ್ಯಾನ್ ಒನ್ ಪೋಸ್ಟ್ ಎಂಬ ಅಜೆಂಡಾ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್​ರನ್ನು ಕಟ್ಟಿ ಹಾಕಬೇಕು ಎಂಬುದು ತೆರೆಮರೆಯ ಕಸರತ್ತು. ಕಾಂಗ್ರೆಸ್​​ಗೆ ವೋಟು ಹಾಕಿದ ಸಮುದಾಯಕ್ಕೆ ಅಧಿಕಾರ ನೀಡಿ, ವೋಟು ಕೊಡದ ಸಮುದಾಯದ ನಾಯಕರಿಗೆ ಪಕ್ಷದಲ್ಲಿ ಮಣೆ ಯಾಕೆ? ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗ, ಲಿಂಗಾಯತ ಮತಗಳು ಕೈ ಹಿಡಿದಿಲ್ಲ, ದಲಿತ, ಮುಸ್ಲಿಂ, ಹಿಂದುಳಿದ ಮತಗಳು ಹೆಚ್ಚು ಕಾಂಗ್ರೆಸ್​ಗೆ ಬಂದಿವೆ.

ಈ ಸಮುದಾಯದ ನಾಯಕರಿಗೆ ಹೆಚ್ಚು ಅಧಿಕಾರ ನೀಡಬೇಕೆಂಬ ಕೂಗು ಇವರದ್ದು. ಈ ಸಮುದಾಯದವರಿಗೆ ಡಿಸಿಎಂ, ಅಧ್ಯಕ್ಷ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿರುವ ನಾಯಕರು, ಶೀಘ್ರ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ.

ಹೀಗೆ ಒಂದು ವರ್ಗ ಕೆಪಿಸಿಸಿ ಅಧ್ಯಕ್ಷಗಿರಿಯ ಮೇಲೆ ದೃಷ್ಟಿ ನೆಟ್ಟಿದ್ದರೆ ಅತ್ತ ಮಾಜಿ ಸಚಿವ ವಿನಯ್ ಕುಲಕರ್ಣಿ ನೇತೃತ್ವದ ಶಾಸಕರ ನಿಯೋಗ ಮತ್ತೊಂದು ಆಗ್ರಹ ಮಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವುದೇ ಆದರೆ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಿ ಎಂಬ ದಾಳ ಉರುಳಿಸಿದೆ.

ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿರುವ ವಿನಯ್ ಕುಲಕರ್ಣಿ ಅಂಡ್ ಟೀಂ ಲಿಂಗಾಯತ ನಾಯಕರಿಗೇ ಮಣೆ ಹಾಕಿ ಎಂಬ ದಾಳ ಹಾಕಿದೆ.

ಒಟ್ಟಾರೆ ಲೋಕಸಭಾ ಚುನಾವಣೆಯಲ್ಲಿ ಯಾವಾಗ ಕಿರಿಯ ಸಹೋದರ ಡಿ.ಕೆ.ಸುರೇಶ್ ಸೋತು ಕಾಂಗ್ರೆಸ್ ರಾಜ್ಯದಲ್ಲಿ ಕೇವಲ 9 ಸ್ಥಾನಗಳಿಗೆ ತೃಪ್ತಿ ಪಡಬೇಕಾಯಿತೊ ಅಂದಿನಿಂದಲೇ ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸ್ಥಾನ ಕಳೆದುಕೊಳ್ಳುವ ದಿನಗಳು ಹತ್ತಿರವಾಗಿವೆ.


Share It

You cannot copy content of this page