ಹಾಸನ: ಕೆಎಸ್ಆರ್ಟಿಸಿ ಬಸ್ಸೊಂದು ಡಿಕ್ಕಿ ಹೊಡೆದ ಕಾರಣ ಕಾರು ರಸ್ತೆ ಬದಿಯಲ್ಲಿದ್ದ ತರಕಾರಿ ಅಂಗಡಿಗೆ ನುಗ್ಗಿರುವ ಘಟನೆ ಹಾಸನ ಪಟ್ಟಣದಲ್ಲಿ ನಡೆದಿದೆ.
ಹಳೇ ರಾಷ್ಟ್ರೀಯ ಹೆದ್ದಾರಿ 75ರ ಬಾಳೆಗದ್ದೆ ಬಡಾವಣೆಯಲ್ಲಿರುವ ಕುಬೇರ ಹೋಟೆಲ್ ಸಮೀಪ ಹ್ಯುಂಡೈ ಐ20 ಕಾರು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಚಲಿಸುತ್ತಿತ್ತು. ಈ ಸಂದರ್ಭದಲ್ಲಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ಅಡ್ಡ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ರಸ್ತೆಯ ಮತ್ತೊಂದು ಬದಿಯಲ್ಲಿದ್ದ ತರಕಾರಿ ಅಂಗಡಿಗೆ ನುಗ್ಗಿದೆ.
ತರಕಾರಿ ಅಂಗಡಿಯ ಮಾಲಕಿ ಇನ್ನೊಂದೆಡೆ ಇದ್ದುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ನುಗ್ಗಿದ ರಭಸಕ್ಕೆ ತರಕಾರಿ ಅಂಗಡಿಗೆ ಹಾನಿಯಾಗಿದೆ. ಅಂಗಡಿ ಮುಂಭಾಗ ನಿಲುಗಡೆ ಮಾಡಿದ್ದ ಮತ್ತೊಂದು ಕಾರಿಗೂ ಬಸ್ ಡಿಕ್ಕಿ ಹೊಡೆದಿದೆ. ಘಟನೆಯ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
