ಬೆಂಗಳೂರು: ರಾಜ್ಯದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಸಂಸ್ಥೆ ಗುಡ್ ನ್ಯೂಸ್ ನೀಡಿದ್ದು, ತನ್ನೆಲ್ಲ ನಿಗಮಗಳಲ್ಲಿ ಸಂಚರಿಸುವ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಮಾಡಿದೆ.
ಮುಖ್ಯ ಸಂಚಾರ ವ್ಯವಸ್ಥಾಪಕರಾದ ಎಸ್. ರಾಜೇಶ್ ಅವರು ಬಿಡುಗಡೆ ಮಾಡಿರುವ ಸುತ್ತೋಲೆಯಲ್ಲಿ 1 ರಿಂದ 9 ನೇ ತರಗತಿವರೆಗಿನ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಣೆ ಮಾಡಿರುವ ಕುರಿತು ಮಾಹಿತಿ ನೀಡಿದ್ದಾರೆ. ಈ ಮಾಹಿತಿಯ ಅನ್ವಯ ವಿದ್ಯಾರ್ಥಿಗಳಿಗೆ ಬಸ್ಗಳಲ್ಲಿ ಉಚಿತವಾಗಿ ಹಳೆಯ ಪಾಸ್ ತೋರಿಸಿ ಪ್ರಯಾಣಿಸಲು ಅನುಕೂಲ ಮಾಡಿಕೊಡುವಂತೆ ನಿಗಮದ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಸ್ತುತ ಬಸ್ ಪಾಸ್ ಅವಧಿಯು ಮಾರ್ಚ್ 31ಕ್ಕೆ ಪೂರ್ಣಗೊಂಡಿದೆ. ಆದರೆ, 1 ರಿಂದ 9 ನೇ ತರಗತಿವರೆಗಿನ ಮಕ್ಕಳಿಗೆ ಶಾಲೆಗಳು ಏಪ್ರಿಲ್ 10ರವರೆಗೆ ತೆರೆದಿರುತ್ತವೆ. ಹೀಗಾಗಿ, ಆ ಮಕ್ಕಳಿಗೆ ಬಸ್ಗಳಲ್ಲಿ ಸಂಚರಿಸಲು ಅನುಕೂಲ ಕಲ್ಪಿಸಲಾಗಿದೆ. ಸಚಿವ ರಾಮಲಿಂಗಾ ರೆಡ್ಡಿ ಅವರು ಮಕ್ಕಳಿಗೆ ಆಗುವ ತೊಂದರೆಗಳ ಕುರಿತು ನಿಗಾವಹಿಸಿ, ನೀಡಿದ ಆದೇಶದ ಅನ್ವಯ ಮುಖ್ಯ ಸಂಚಾರ ವ್ಯವಸ್ಥಾಪಕರು ಈ ಸುತ್ತೋಲೆ ಹೊರಡಿಸಿದ್ದಾರೆ.

