ಸುದ್ದಿ

ಕುಣಿಗಲ್ ಜನಸ್ಪಂದನ : ಸಾರ್ವಜನಿಕರಿಂದ ದೂರುಗಳ ಸುರಿಮಳೆ

Share It

ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕು ಹುತ್ರಿದುರ್ಗ ಹೋಬಳಿ ಸಂತೇಪೇಟೆ ಸರ್ಕಲ್‌ನಲ್ಲಿ ಜಿಲ್ಲಾಡಳಿತದ ವತಿಯಿಂದ ಗುರುವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಅಧಿಕಾರಿಗಳ ಮೇಲೆ ದೂರಿನ ಸುರಿಮಳೆಗೈದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ: ಹೆಚ್.ಡಿ.ರಂಗನಾಥ್ ಹಾಗೂ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಬಳಿ ಹುತ್ರಿದುರ್ಗ ಪಂಚಾಯತಿ ಜನತೆ ತಮ್ಮ ಸಮಸ್ಯೆಗಳ ಅಹವಾಲುಗಳನ್ನು ಸಲ್ಲಿಸುತ್ತ ನರೇಗಾ ಯೋಜನೆ, ಶೌಚಾಲಯ, ಪೌತಿ ಖಾತೆ, ಬಗರ್ ಹುಕುಂ,   ಗ್ಯಾರಂಟಿ ಯೋಜನೆಗಳು, ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಹರಿಗೆ   ಸೌಲಭ್ಯ ನೀಡಲು ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ.  ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ನಿರ್ಮಿಸಿಕೊಂಡ ವೈಯಕ್ತಿಕ ಶೌಚಾಲಯ, ನರೇಗಾ ಯೋಜನೆಯಡಿ ನಿರ್ಮಿಸಿರುವ ದನದ ಕೊಟ್ಟಿಗೆ ಬಾಕಿ ಬಿಲ್ಲನ್ನು ಪಾವತಿಸಲು ಕಳೆದ ೭ ವರ್ಷಗಳಿಂದಲೂ ಮನವಿ ಕೊಡುತ್ತಿದ್ದರೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕ್ರಮಕೈಗೊಂಡಿಲ್ಲವೆAದು ತಮ್ಮ ಅಳಲನ್ನು ತೋಡಿಕೊಂಡರು. 

ಶಾಸಕ ಡಾ: ಹೆಚ್.ಡಿ.ರಂಗನಾಥ್ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಸೇರಿದಂತೆ ಯಾವುದೇ ಯೋಜನೆಗಳಡಿ ಜನರಿಗೆ ಅದರಲ್ಲೂ ಗ್ರಾಮೀಣ ಜನರಿಗೆ ಸೌಲಭ್ಯ ತಲುಪಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. 

ಜನಸ್ಪಂದನ ಕಾರ್ಯಕ್ರಮದ ಮೂಲಕ ಆಡಳಿತವೇ ಜನರ ಬಳಿಗೆ ಬಂದು ಸಮಸ್ಯೆಗಳನ್ನು ಪರಿಹರಿಸಬೇಕೆಂಬ ಸರ್ಕಾರದ ಕನಸನ್ನು ಅಧಿಕಾರಿಗಳು ನನಸಾಗಿಸಬೇಕು. ಪ್ರತಿಯೊಬ್ಬರಿಗೂ ಸರ್ಕಾರಿ ಸೌಲಭ್ಯಗಳು ದೊರೆಯಬೇಕು. ಎಷ್ಟೋ ರೈತ ಕುಟುಂಬಗಳು ಇದುವರೆಗೂ ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಕಂಡೇ ಇಲ್ಲ. ಅಂತಹವರನ್ನು ಹುಡುಕಿ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಾಮಾಜಿಕ ಭದ್ರತಾ ಯೋಜನೆಯಡಿ ಕಳೆದೈದು ತಿಂಗಳಿನಿಂದ ಮನಸ್ವಿನಿ, ಮೈತ್ರಿ, ವೃದ್ಧಾಪ್ಯವೇತನದ ಮೊತ್ತ ಖಾತೆಗೆ ಜಮೆಯಾಗುತ್ತಿಲ್ಲ.  ಕ್ರಮಕೈಗೊಳ್ಳಲು ಅನೇಕ ಬಾರಿ ಅಧಿಕಾರಿಗಳಿಗೆ ಬೇಡಿಕೊಂಡರೂ ಪ್ರಯೋಜನವಾಗಿಲ್ಲವೆಂದು ವೃದ್ಧರೊಬ್ಬರು ಸೇರಿ ಮಹಿಳೆಯರು ದೂರು ನೀಡಿದಾಗ ಮಾತನಾಡಿದ ಶಾಸಕರು, ವಯೋವೃದ್ಧರ ಇಳಿ ವಯಸ್ಸಿನಲ್ಲಿ ನೆರವಾಗಲೆಂದು ಸರ್ಕಾರ ವೃದ್ಧಾಪ್ಯ ವೇತನ ನೀಡುತ್ತಿದೆ.  ಎರಡು ದಿನಗಳೊಳಗೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಿ ತಮಗೆ ಮಾಹಿತಿ ನೀಡಬೇಕು ಎಂದು ತಹಶೀಲ್ದಾರ್ ವಿಶ್ವನಾಥ್ ಅವರಿಗೆ ನಿರ್ದೇಶಿಸಿದರು. 

ಕುಣಿಗಲ್ ತಾಲ್ಲೂಕಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಶಾಲೆಯೊಂದನ್ನು ತೆರೆಯಬೇಕೆಂಬ ಮಹದಾಸೆ ಇದೆ ಎಂದು ಮನಸಿನ ಇಂಗಿತವನ್ನು ವ್ಯಕ್ತಪಡಿಸಿದ ಶಾಸಕರು ಈ ಭಾಗದ ರೈತರ ನೀರಾವರಿ ಅನುಕೂಲಕ್ಕಾಗಿ ಲಿಂಕ್ ಕೆನಾಲ್ ಯೋಜನೆ ಅತ್ಯವಶ್ಯವಾಗಿದೆ.  ಈ ಯೋಜನೆಗಾಗಿ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿ ೧೦೦೦ ಕೋಟಿ ರೂ.ಗಳ ಹಣವನ್ನು ತಂದಿದ್ದರೂ, ಕಾರ್ಯಗತಗೊಳಿಸಲು ಆಡಚಣೆಯಾಗುತ್ತಿದೆ.  ಯೋಜನೆ ಕೈಗೊಳ್ಳಲು ನಮ್ಮ ಮುಂದಿರುವ ಆಕ್ಷೇಪಣೆಗಳ ಬಗ್ಗೆ ಚರ್ಚಿಸಲು ಇಂದು ಸಂಜೆ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ ಇಂದು ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದೆಂದು ತಿಳಿಸಿದರು. 

ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್   ಪಂಚಾಯತಿ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಗಳ ಪ್ರಗತಿ ವಿವರಗಳ  ಮಾಹಿತಿ ನೀಡುತ್ತಾ, ೬೬೫೬ ಜನಸಂಖ್ಯೆಯುಳ್ಳ ಪಂಚಾಯತಿಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ೧,೪೭೦ ಉದ್ಯೋಗ ಚೀಟಿಗಳನ್ನು ನೀಡಲಾಗಿದ್ದು, ೨೦,೪೮೦ ಮಾನವ ದಿನಗಳ ಸೃಜನೆಗೆ ಗುರಿ ಹೊಂದಲಾಗಿತ್ತು.  ಈ ಪೈಕಿ  ೩೦೧೫೪ ಮಾನವ ದಿನಗಳನ್ನು ಸೃಜಿಸುವ ಮೂಲಕ ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ವಿವರಿಸಿದರು.

  ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ ನರೇಗಾ ಯೋಜನೆಯಡಿ ಶೇ.೧೦೦ರಷ್ಟು ಮಾನವ ದಿನಗಳನ್ನು ಸೃಜಿಸಬೇಕು. ಮನೆ-ಮನೆಗೆ ಭೇಟಿ ನೀಡಿ ಉದ್ಯೋಗ ಚೀಟಿ ಪಡೆಯುವ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಮಾನವ ದಿನ ಸೃಜನೆಯಲ್ಲಿ ಪಂಚಾಯತಿ ನಿಗಧಿತ ಗುರಿ ಸಾಧಿಸಿಲ್ಲ.   ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಯಲ್ಲದೆ, ಅಂಗನವಾಡಿ, ಶಾಲಾ ಆವರಣ ಗೋಡೆ ನಿರ್ಮಾಣದಂತಹ ಸಮುದಾಯಾಧಾರಿತ ಕಾಮಗಾರಿಗೆ ಆದ್ಯತೆ ನೀಡಬೇಕು. ಪಂಚಾಯತಿ ವ್ಯಾಪ್ತಿಯ ಜನರ ಬೇಡಿಕೆಗನುಗುಣವಾಗಿ ವೈಯಕ್ತಿಕ ಶೌಚಾಲಯದ ಅವಶ್ಯಕತೆ ಇರುವ ಬಗ್ಗೆ ಸರ್ವೆ ನಡೆಸಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗಬೇಕು ಎಂದು  ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಕುಣಿಗಲ್ ತಾಲ್ಲೂಕಿನಲ್ಲಿ ಬಡವರಿಗೆ ವಸತಿ ಕಲ್ಪಿಸಲು ಆಶ್ರಯ ವಸತಿ ಯೋಜನೆಯಡಿ  ೧೮೮ ಎಕರೆ ಭೂಮಿಯನ್ನು ಗುರುತಿಸಲಾಗಿದ್ದು,  ಅಕ್ಟೋಬರ್ ಮಾಹೆಯೊಳಗಾಗಿ ೧೦,೦೦೦ ನಿವೇಶನಗಳನ್ನು ಗುರುತಿಸಲು ತಾಲ್ಲೂಕು ಆಡಳಿತ ಮುಂದಾಗಿದೆ ಎಂದು ಶಾಸಕರ ಗಮನಕ್ಕೆ ತಂದರು. 

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ, ತಹಶೀಲ್ದಾರ್ ವಿಶ್ವನಾಥ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್, ಕೃಷಿ ಉಪನಿರ್ದೇಶಕ ಅಶೋಕ್ ಗ್ರಾಮ ಪಂಚಾಯತಿ ಅಧ್ಯಕ್ಷೆ ಕೃಷ್ಣವೇಣಿ ಹಾಗೂ ಉಪಾಧ್ಯಕ್ಷ ಕೆ.ಕೆ. ಕೆಂಪಣ್ಣ, ಸೇರಿದಂತೆ ಮತ್ತಿತರರಿದ್ದರು.  

42 ಅರ್ಜಿ ಸ್ವೀಕಾರಃ

ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಅರ್ಜಿ ಸ್ವೀಕರಿಸಲು ಇಲಾಖಾವಾರು ಅರ್ಜಿ ಸ್ವೀಕಾರ ಕೇಂದ್ರಗಳನ್ನು ತೆರೆಯಲಾಗಿತ್ತು.  ಅರ್ಜಿ ಸ್ವೀಕಾರ ಕೇಂದ್ರದಲ್ಲಿ ಕಂದಾಯ ಇಲಾಖೆಗೆ ಸಂಬಧಿಸಿದಂತೆ 33 ಅರ್ಜಿ, ತಾಲ್ಲೂಕು ಪಂಚಾಯತಿ-3, ಬೆಸ್ಕಾಂ-2, ಪುರಸಭೆ-2, ಸಮಾಜ ಕಲ್ಯಾಣ ಇಲಾಖೆ-1, ಗಣಿ ಮತ್ತು ಭೂ ವಿಜ್ಞಾನ ಇಲಾಖೆ-1 ಸೇರಿ ಒಟ್ಟು 42 ಅಹವಾಲುಗಳು ಸ್ವೀಕೃತವಾಗಿವೆ.

Share It

You cannot copy content of this page