ಯಾದಗಿರಿ : ಪಿಎಸ್ಐ ಪರಶುರಾಮ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.
ಸಿಐಡಿ ಅಧಿಕಾರಿಗಳು ನಿನ್ನೆ ಗುರುವಾರ (ಆಗಸ್ಟ್ 8) ರಂದು ಪೊಲೀಸ್ ವಸತಿ ಗೃಹದ ಪರಶುರಾಮ ಮನೆಗೆ ತೆರಳಿ ಸ್ಥಳ ಮಹಜರು ನಡೆಸಿದ್ದಾರೆ. ಮನೆಯಲ್ಲಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹೆಸರಿನ ಲೆಟರ್ ಹೆಡ್ ಪತ್ತೆಯಾಗಿದೆ. ಕಾನೂನು ಸುವ್ಯವಸ್ಥೆ ಪೋಸ್ಟಿಂಗ್ ಬೇರೆಯವರಿಗೆ ಕೊಟ್ಟ ಹಿನ್ನೆಲೆಯಲ್ಲಿ ಅಪರಾಧ ವಿಭಾಗದ ಪೋಸ್ಟಿಂಗ್ ಕೊಡಿ ಎಂದು ಪರಶುರಾಮ ಕೇಳಿದ್ದರು. ಇದೇ ಕಾರಣಕ್ಕೆ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಯಾದಗಿರಿ ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಪೋಸ್ಟಿಂಗ್ಗಾಗಿ ಲೆಟರ್ ಹೆಡ್ ನೀಡಿದ್ದರು.
ಈ ಲೆಟರ್ ಹೆಡ್ ಸಿಐಡಿ ಅಧಿಕಾರಿಗಳು ಮಹಜರು ವೇಳೆ ಪತ್ತೆಯಾಗಿದ್ದು, ಲೆಟರ್ ಹೆಡ್ ಅನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಯಾದಗಿರಿ ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಪೋಸ್ಟಿಂಗ್ಗಾಗಿ ಶಾಸಕ ಚೆನ್ನಾರೆಡ್ಡಿ 15 ಲಕ್ಷ ರೂ. ಕೇಳಿದ್ದರು ಎನ್ನಲಾಗಿದೆ. ಹೀಗಾಗಿ ಪಿಎಸ್ಐ ಪರಶುರಾಮ ಹಣ ಹೊಂದಿಸುತ್ತಿದ್ದರು. ವಸತಿ ಗೃಹದಲ್ಲಿ ಪೋಸ್ಟಿಂಗ್ಗಾಗಿ ಕೂಡಿಟ್ಟ 7.33 ಲಕ್ಷ ನಗದು ಸಿಕ್ಕಿದ್ದು, ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪರಶುರಾಮ ಅವರಿಗೆ ಸೇರಿದ 4 ಬ್ಯಾಂಕ್ ಖಾತೆಗಳಲ್ಲಿನ ಹಣದ ಮಾಹಿತಿಯನ್ನೂ ಸಹ ಸಿಐಡಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಜೊತೆಗೆ ಇಲಾಖಾ ರಿವಾಲ್ವರ್ (ಬಂದೂಕು), ಸಿಮ್ಕಾರ್ಡ್, ಮೊಬೈಲ್ ಮತ್ತು ವಾಕಿಟಾಕಿ ಜಪ್ತಿ ಮಾಡಿದ್ದಾರೆ. ಪರಶುರಾಮ ಮೃತಪಟ್ಟ ಜಾಗದಲ್ಲಿ ಮೂಗಿನಿಂದ ಬಾಯಿಂದ ಬಂದ ರಕ್ತದ ಮಾದರಿ ಸಹ ಸಂಗ್ರಹಿಸಲಾಗಿದೆ.
ಮೊಬೈಲ್ನಲ್ಲಿವೆ ಮಹತ್ವದ ಆಡಿಯೋಗಳು!
ಮೃತ ಪಿಎಸ್ಐ ಪರಶುರಾಮ ಪ್ರತಿಯೊಂದು ಕರೆಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಪೋಸ್ಟಿಂಗ್ ಆಗದೆ ಇರುವ ಬಗ್ಗೆ, ಸ್ನೇಹಿತರು ಮತ್ತು ಕುಟುಂಬಸ್ಥರ ಮುಂದೆ ಪೋಸ್ಟಿಂಗ್ ಹಣ ಕೇಳಿರುವ ದೂರವಾಣಿ ಮೂಲಕ ಸಂಭಾಷಣೆ ಮಾಡಿದ್ದಾರೆ. ಈ ಎಲ್ಲಾ ಸಂಭಾಷಣೆಗಳ ಆಡಿಯೋ ಮೃತ ಪಿಎಸ್ಐ ಪರಶುರಾಮ ಅವರ ಆಂಡ್ರಾಯ್ಡ್ ಮೊಬೈಲ್ನಲ್ಲಿವೆ.
ಯಾದಗಿರಿ ಸೈಬರ್ ಕ್ರೈಂ ಠಾಣೆಯ ಪಿಎಸ್ಐ ಆಗಿದ್ದ ಪರಶುರಾಮ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಪಿಎಸ್ಐ ಪರಶುರಾಮ ಸಾವಿಗೆ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಮತ್ತು ಅವರ ಪುತ್ರ ಪಂಪಾಗೌಡ ಕಾರಣವೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ವಿರುದ್ಧ ಜಾತಿ ನಿಂದನೆ ಆರೋಪದಡಿ ದೂರು ದಾಖಲಾಗಿದೆ. ಪಿಎಸ್ಐ ಪರಶುರಾಮ ಶಂಕಾಸ್ಪದ ಸಾವು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ತಲೆನೋವಾಗಿದೆ. ಕಾಕತಾಳೀಯ ಎಂಬಂತೆ ಪಿಎಸ್ಐ ಪರಶುರಾಮ ಸಾವಿನ ಬಳಿಕ ಶಾಸಕ ಚೆನ್ನಾರೆಡ್ಡಿ ನಾಪತ್ತೆಯಾಗಿದ್ದಾರೆ.

