ಬೆಂಗಳೂರು: ಬಸವನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನಾ ಆದೇಶವನ್ನು ಹಿಂಪಡೆಯದಿದ್ದರೆ ಬಿಜೆಪಿ ವಿರುದ್ಧ ಬೆಳಗಾವಿಯಲ್ಲಿ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಯತ್ನಾಳ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೋರಾಟ ಸಂಘಟಿಸುವ ಕುರಿತು ಚರ್ಚೆಗಳು ನಡೆದಿವೆ. ಅತೃಪ್ತ ಬಣದ ಸಭೆಯೂ ಕೂಡ ಶುಕ್ರವಾರ ನಡೆದಿದ್ದು, ಸಭೆಯ ನಂತರ ಯಾವುದೇ ತೀರ್ಮಾನಗಳ ಕುರಿತು ನಾಯಕರು ಬಾಯಿಬಿಟ್ಟಿಲ್ಲ.
ಆದರೆ, ಪಂಚಮಸಾಲಿ ಲಿಂಗಾಯತ ಹೋರಾಟದ ನೇತೃತ್ವವಹಿಸಿದ್ದ ಕೂಡಲಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಯತ್ನಾಳ್ ಪರ ಬ್ಯಾಟ್ ಬೀಸಿದ್ದು, ಅವರ ಉಚ್ಛಾಟನೆಯನ್ನು ವಾಪಸ್ ಪಡೆಯದಿದ್ದರೆ, ಬೃಹತ್ ಹೋರಾಟ ಸಂಘಟಿಸಲಾಗುವುದು. ಬಿಜೆಪಿ ವಿರುದ್ಧ ಏ.13 ರಂದು ಬೆಳಗಾವಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.