ಬೆಂಗಳೂರು: ನಾಳೆ ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದ್ದು, ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತ ಎಣೀಕೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳ 14 ಸ್ಥಾನಗಳಿಗೆ ಮೊದಲ ಹಂತದ ಮತದಾನ ಏಪ್ರಿಲ್ 26 ರಂದು ಮತ್ತು ಉತ್ತರ ಕರ್ನಾಟಕದ ಇತರ 14 ಜಿಲ್ಲೆಗಳಲ್ಲಿ ಎರಡನೇ ಹಂತದ ಮತದಾನ ಮೇ 7 ರಂದು ನಡೆದಿದೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ತಲಾ ಒಂದು ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. ಆದರೆ, ತುಮಕೂರಿನಲ್ಲಿ ಎರಡು ಸ್ಥಳಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಒಟ್ಟು ಎಣಿಕೆ ಕೇಂದ್ರಗಳ ಸಂಖ್ಯೆ 29 ಆಗಿದೆ.
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಈ ಬಗ್ಗೆ ಮಾತನಾಡಿ, “ಕರ್ನಾಟಕದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿವೆ ಮತ್ತು ರಾಜ್ಯದ 29 ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು ಮತ್ತು ಮೈಕ್ರೋ ವೀಕ್ಷಕರು ಸೇರಿದಂತೆ 13,173 ಎಣಿಕೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ” ಎಂದು ಅವರು ಹೇಳಿದರು.
“ಸಿಬ್ಬಂದಿಗೆ ಅಗತ್ಯವಿರುವ ಎಲ್ಲಾ ತರಬೇತಿಯನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಪ್ರತಿ ಎಣಿಕೆ ಕೇಂದ್ರದಲ್ಲಿ ಇವಿಎಂ ಮತ್ತು ಅಂಚೆ ಮತಪತ್ರಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಎಣಿಕೆ ಮಾಡಲಾಗುತ್ತದೆ. ಈ ಪ್ರತಿ ಎಣಿಕೆ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳೊಂದಿಗೆ (ಕಂಪ್ಯೂಟರ್‌ಗಳು, ಜೆರಾಕ್ಸ್, ಫ್ಯಾಕ್ಸ್, ಪ್ರಿಂಟರ್‌ಗಳೊAದಿಗೆ) ಮಾಧ್ಯಮ ಕೇಂದ್ರ ಸ್ಥಾಪಿಸಲಾಗಿದೆ. ಈ ಮೂಲಕ ವರದಿಗಾರರು ಮಾಧ್ಯಮ ಸಂಸ್ಥೆಗಳಿಗೆ ವರದಿ ಮಾಡಲು ಸಹಾಯಕವಾಗಲಿದೆ” ಎಂದು ತಿಳಿಸಿದರು.
ಬೆಂಗಳೂರಲ್ಲಿ ಮತ ಎಣಿಕೆಗೆ ಸಿದ್ಧತೆ: ಬೆಂಗಳೂರು ಕ್ಷೇತ್ರದ ಮೌಂಟ್ ಕಾರ್ಮೆಲ್ ಕಾಲೇಜು, ವಸಂತನಗರ (ಬೆಂಗಳೂರು ಕೇಂದ್ರ ಕ್ಷೇತ್ರ), ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ವಿಠಲ್ ಮಲ್ಯ ರಸ್ತೆ (ಬೆಂಗಳೂರು ಉತ್ತರ ಕ್ಷೇತ್ರ) ಮತ್ತು ಜಯನಗರದ ಎಂಆರ್‌ವಿ ಕಾಲೇಜು (ಬೆಂಗಳೂರು ದಕ್ಷಿಣ ಕ್ಷೇತ್ರ) ಮತ ಎಣಿಕೆ ಕೇಂದ್ರಗಳಲ್ಲಿ 2,400 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಿಗಿ ಪೊಲೀಸ್ ಭದ್ರತೆ: ಮತ ಎಣಿಕೆಗಾಗಿ ಬೆಂಗಳೂರು ನಗರ ಪೊಲೀಸ್ ಘಟಕದಿಂದ ಒಟ್ಟು 1524 ಅಧಿಕಾರಿಗಳು/ಸಿಬ್ಬಂದಿ, 13 ಸಶಸ್ತ್ರ ಮೀಸಲು ಘಟಕಗಳು ಮತ್ತು ನಾಲ್ಕು ತ್ವರಿತ ಪ್ರತಿಕ್ರಿಯೆ ತಂಡಗಳನ್ನು ನಿಯೋಜಿಸಲಾಗಿದ್ದು, ಈಗಾಗಲೇ ಸಿವಿಲ್ ಮತ್ತು ನಗರ ಸಶಸ್ತ್ರ ಮೀಸಲು ಘಟಕಗಳು ಸೇರಿದಂತೆ 516 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಮೂರು ಪಾಳಿಗಳಲ್ಲಿ ಸ್ಟ್ರಾಂಗ್ ರೂಮ್ ಭದ್ರತಾ ಕರ್ತವ್ಯವನ್ನು ನಿರ್ವಹಿಸಲು ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರಗಳ ಸುತ್ತ ಸಂಚಾರ ದಟ್ಟಣೆಗೆ ಅಡ್ಡಿಯಾಗದಂತೆ 400 ಕ್ಕೂ ಹೆಚ್ಚು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗುವುದು.

