ಸುದ್ದಿ

ರಾಜ್ಯದ 51 ಕಡೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಬೆಳ್ಳಂಬೆಳಗ್ಗೆ ಲೋಕಾ ದಾಳಿ!

Share It

ಬೆಂಗಳೂರು: ಬೆಳಗಿನ ಜಾವದ ಸುಖದ ನಿದ್ದೆಯಲ್ಲಿದ್ದ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬಿಸಿ ಮುಟ್ಟಿಸಿದೆ. ಇಂದು ಬೆಳ್ಳಂಬೆಳಿಗ್ಗೆ ರಾಜ್ಯದ 51 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆ ಎಂದು ಬಂದಿದ್ದ 12 ದೂರುಗಳ ಸಂಬಂಧ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದಾರೆ.

ಬೆಂಗಳೂರು ನಗರದ 6, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 2, ಶಿವಮೊಗ್ಗ ಜಿಲ್ಲೆಯ 2, ಯಾದಗಿರಿ, ತುಮಕೂರಿನಲ್ಲಿ ತಲಾ ಓರ್ವ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಕೆಐಎಡಿಬಿ ಅಪರ ನಿರ್ದೇಶಕ ಸಿ.ಟಿ ಮುದ್ದುಕುಮಾರ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಏಕಕಾಲದಲ್ಲಿ ಒಟ್ಟು 7 ಕಡೆಗಳಲ್ಲಿ ದಾಳಿ ನಡೆದಿದೆ. ಬೆಂಗಳೂರಿನ ನಾಗರಭಾವಿಯ 2ನೇ ಹಂತದಲ್ಲಿರುವ ವಾಸದ ಮನೆ, ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಕಚೇರಿ, ತುಮಕೂರು ನಗರದ ಬನಶಂಕರಿಯಲ್ಲಿರುವ ಮನೆ, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಮನೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿ ರಂಗನಾಥಪುರದಲ್ಲಿರುವ ಫಾರಂಹೌಸ್, ತುಮಕೂರಿನ ಅಂತರಸನಹಳ್ಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ಯಾಕ್ಟರಿ (ಪ್ಲಾಸ್ಟಿಕ್ ಬಾಟಲ್ ತಯಾರಿಕಾ ಘಟಕ) ಸೇರಿ ಒಟ್ಟು 7 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತುಮಕೂರು ಲೋಕಾಯುಕ್ತ ಅಧಿಕಾರಿ ಲಕ್ಷ್ಮೀ ಗಣೇಶ್ ಮಾರ್ಗದರ್ಶನದಲ್ಲಿ, ಲೋಕಾಯುಕ್ತ ಡಿವೈಎಸ್ಪಿ ಬಿ.ಉಮಾಶಂಕರ್, ರಾಮಕೃಷ್ಣಯ್ಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಇನ್ಸ್‌ಪೆಕ್ಟರ್ ಗಳಾದ ಶಿವರುದ್ರಪ್ಪ ಮೇಟಿ, ಮಹಮ್ಮದ್ ಸಲೀಂ ಸೇರಿ ಇನ್ನಿತರ ಅಧಿಕಾರಿಗಳು ಭಾಗಿಯಾಗಿದ್ದಾರೆ. ಒಟ್ಟು 30 ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.

ಯಾದಗಿರಿ ಜಿಲ್ಲೆ ಯೋಜನಾಧಿಕಾರಿ ನಿವಾಸದ ಮೇಲೆ ದಾಳಿ

ಯಾದಗಿರಿ ಜಿಲ್ಲೆಯ ಯೋಜನಾಧಿಕಾರಿ ಬಲವಂತ ರಾಠೋಡ ನಿವಾಸದ‌ ಮೇಲೆ ದಾಳಿ ನಡೆದಿದೆ. ಯಾದಗಿರಿ-ವಿಜಯಪುರ ಸೇರಿ ನಿವಾಸ, ಕಚೇರಿ ಮೇಲೆ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ.‌ ನಗರದ ಡಿಸಿಸಿ ಬ್ಯಾಂಕ್ ಹಿಂಬದಿ ಕೆ.ಸಿ ರಸ್ತೆ ನಿವಾಸದಲ್ಲಿ ದಾಖಲಾತಿ‌ ಪರಿಶೀಲನೆ ಮುಂದುವರಿದಿದೆ.

ದೊಡ್ಡಬಳ್ಳಾಪುರ ತಾಲೂಕಿನ ಹಿರಿಯ ಪಶುವೈದ್ಯಕೀಯ ಪರೀಕ್ಷಕರ ಮನೆ ಮೇಲೆ ದಾಳಿ ನಡೆದಿದೆ. ತಾಲೂಕಿನ ಹಿರಿಯ ಪಶು ಪರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದಪ್ಪ ಮನೆ ಮೇಲೆ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ.


Share It

You cannot copy content of this page