ಲಂಚ ಪಡೆಯುತ್ತಿದ್ದ ಗ್ರಾಪಂ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ
ಶಿವಮೊಗ್ಗ: ನಿವೇಶನ ಖಾತೆ ಮಾಡಿಕೊಡಲು ಸಾರ್ವಜನಿಕರಿಂದ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ತಾಲೂಕಿನ ಅಬ್ಬಲಗೆರೆ ಗ್ರಾಪಂ ಕಾರ್ಯದರ್ಶಿ ಗ್ರೇಡ್ -೨ ಯೋಗೇಶ್ ಅಚರು, ಶಿವಮೊಗ್ಗದ ನಿವಾಸಿ ಯಶವಂತ ಎಂಬುವವರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪದಲ್ಲಿ ಬಂಧಿಸಲಾಗಿದೆ. ಯಶವಂತ್ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಲಂಚ ಪಡೆಯುವ ಸಂದರ್ಭದಲ್ಲಿ ಯೋಗೇಶ್ ಅವರನ್ನು ಬಂದಿಸಿದ್ದಾರೆ.
ಯಶವಂತ ಅವರಿಗೆ ಅಬ್ಬಲಗೆರೆ ಗ್ರಾ.ಪಂ.ವ್ಯಾಪ್ತಿಯ ಚನ್ನಮುಂಭಾಪುರದಲ್ಲಿ ೧೦ ಗುಂಟೆ ಜಾಗ ತಮ್ಮ ತಂದೆಯಿAದ ಬರಬೇಕಿತ್ತು. ಇದನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡಲು ೬ ತಿಂಗಳ ಹಿಂದೆ ಅಬ್ಬಲಗೆರೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಪಂಚಾಯತಿ ಕಾರ್ಯದರ್ಶಿ ಯಶವಂತ ಖಾತೆ ಮಾಡಿಕೊಡಲು ೧೫ ಸಾವಿರ ರೂ ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಈ ಕುರಿತು ಯಶವಂತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಅಬ್ಬಲಗೆರೆ ಪಂಚಾಯಿತಿ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದಾಗ ಯೋಗೇಶ್ ಅವರನ್ನು ಲೋಕಾಯುಕ್ತ ಅಧಿಕ್ಷಕ ವೀರಬಸಪ್ಪ ಕುಸಾಲಪುರ ತಂಡ ರೆಡ್ ಹ್ಯಾಂಡ್ ಆಗಿ ಬಂಧಿಸಿದೆ. ಲೋಕಾಯುಕ್ತ ಶಿವಮೊಗ್ಗ ಅಧೀಕ್ಷಕ ಮಂಜುನಾಥ್ ಚೌಧರಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪಅಧೀಕ್ಷಕ ಉಮೇಶ್ ಈಶ್ವರ್ ನಾಯಕ್ ಸೇರಿದಂತೆ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡ ಭಾಗವಹಿಸಿತ್ತು.