ಹೊಸಕೋಟೆ: ಅಂಗನವಾಡಿಗೆ ಬರುವ ಮಕ್ಕಳನ್ನು ನಮ್ಮ ಮಕ್ಕಳಂತೆ ಭಾವಿಸಿ ಪ್ರೀತಿ–ಕಾಳಜಿಯಿಂದ ಆರೈಕೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದ್ದು, ಅದರಿಂದಲೇ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಹೊಸಕೋಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಅಂಗನವಾಡಿ ಕೇಂದ್ರಗಳಿಗೆ ನೇಮಕಗೊಂಡ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿ , ಗರ್ಭಿಣಿಯರು ಮತ್ತು ಮಕ್ಕಳ ಆರೈಕೆಯಲ್ಲಿ ಯಾವುದೇ ತಾರತಮ್ಯ ಮಾಡದೆ ಸಮಾನವಾಗಿ ಸೇವೆ ನೀಡಬೇಕು. ಸರಕಾರದ ಸೌಲಭ್ಯಗಳು ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಬೇಕು. ಗ್ರಾಮದಲ್ಲಿ ರಾಜಕೀಯದಿಂದ ದೂರವಿದ್ದು, ತಾಯಿಯ ಸ್ಥಾನದಲ್ಲಿರುವ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು ಎಂದರು. ಆಯ್ಕೆಯಲ್ಲಿ ಯಾವುದೇ ಪಕ್ಷ, ಜಾತಿ, ಧರ್ಮ ಪರಿಗಣಿಸದೆ ಅರ್ಹತೆಯ ಆಧಾರದ ಮೇಲೆ ನೇಮಕ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಹೊಸಕೋಟೆ ತಾಲೂಕಿನಲ್ಲಿ ಖಾಲಿಯಿದ್ದ 13 ಅಂಗನವಾಡಿ ಕಾರ್ಯಕರ್ತೆ ಹಾಗೂ 30 ಸಹಾಯಕಿ ಹುದ್ದೆಗಳಿಗೆ ಸೇರಿ ಒಟ್ಟು 43 ಮಂದಿಗೆ ನೇಮಕಾತಿ ಆದೇಶ ನೀಡಲಾಯಿತು. ಸಭೆಯಲ್ಲಿ ಯೋಜನಾ ಪ್ರಾಧಿಕಾರ ಸದಸ್ಯ ಡಾ. ಹೆಚ್.ಎಂ. ಸುಬ್ಬರಾಜ್ ಮತ್ತು ಸಿಡಿಪಿಒ ಶಿವಮ್ಮ ಉಪಸ್ಥಿತರಿದ್ದರು.

