ಬೆಂಗಳೂರು: ಬೆಳ್ಳಂಬೆಳಗ್ಗೆ ವಾಕಿಂಗ್ ಮಾಡಲು ತೆರಳುತ್ತಿದ್ದ ಮಹಿಳೆಯ ಮೇಲೆ ಕಾಮುಕನೊಬ್ಬ ಕ್ರೌರ್ಯ ಮೆರೆದಿದ್ದು, ಆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆಗಸ್ಟ್ ೨ರಂದು ನಡೆದಿರುವ ಘಟನೆ ಇದಾಗಿದ್ದು, ಈ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮೂರು ದಿನದ ನಂತರ ಪೊಲೀಸರು ಕಾಮುಕನನ್ನು ಬಂಧಿಸಿದ್ದು, 25 ವರ್ಷದ ಕಾರು ಚಾಲಕ ಸುರೇಶ್ ಎಂಬಾತ ಬಂಧಿತ.
ಬೆಳಗಿನ ಜಾವ ಐದು ಗಂಟೆ ಕೋಣನಕುಂಟೆ ಬಳಿಯ ಕೃಷ್ಣಾನಗರದ ಪಾರ್ಕ್ಗೆ ವಾಕಿಂಗ್‌ಗೆ ಬಂದಿದ್ದ ಮಹಿಳೆಯನ್ನು ಬಲವಂತವಾಗಿ ತಬ್ಬಿ ಹಿಡಿದು ಚುಂಬಿಸಿ ಸುರೇಶ್ ಎಸ್ಕೇಪ್ ಆಗಿದ್ದ. ಮಹಿಳೆ ಭಯದಿಂದ ವಾಪಸ್ ಮನೆಗೆ ತೆರಳಿದ್ದು, ದೂರು ನೀಡಲು ಸಹ ಮುಂದೆ ಬಂದಿರಲಿಲ್ಲ. ಆದರೆ, ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದ ಕಾರಣ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಪ್ರಕರಣದಲ್ಲಿ ನಿರ್ಲಕ್ಸ್ಯವಹಿಸಿದ್ದ ಆರೋಪದಡಿಯಲ್ಲಿ ಕೋಣನಕುಂಟೆ ಪೊಲೀಸ್ ಠಾಣೆಯ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಕೋಣನಕುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡು ಆರೋಪಿಗಾಗಿ ಹುಡಕಾಟ ನಡೆಸಿದ್ದರು.

