ಬೆಂಗಳೂರು: ಚಲಿಸುತ್ತಿದ್ದ ಆಟೊ ಮೇಲೆ ಬುಧವಾರ ಬೆಳಿಗ್ಗೆ ಮರದ ಕೊಂಬೆ ಬಿದ್ದು ಚಾಲಕ ಮೃತಪಟ್ಟಿರುವ ಘಟನೆ ಜಯನಗರದ ನಾಲ್ಕನೇ ಟಿ ಬ್ಲಾಕ್‌ನಲ್ಲಿ ನಡೆದಿದೆ.
ಪಾದರಾಯನಪುರದ ಆಟೊ ಚಾಲಕ ಖಲೀಲ್ (55) ಮೃತ ವ್ಯಕ್ತಿ. ಬೆಳಗ್ಗೆ 8.20ಕ್ಕೆ ಖಲೀಲ್ ಅವರು ಜಯನಗರದ 4ನೇ ಟಿ ಬ್ಲಾಕ್‌ನಲ್ಲಿ ಆಟೊ ಚಲಾಯಿಸಿಕೊಂಡು ತೆರಳುತ್ತಿದ್ದರು. ಆಟೊ ಮೇಲೆ ಮರದ ಕೊಂಬೆ ಬಿದ್ದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಖಲೀಲ್ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೇ ಮದ್ಯಾಹ್ನ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಬಿದ್ದ ಮರದ ಕೊಂಬೆಯನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ.
ಬಿಬಿಎಂಪಿ ನಿಯಮಗಳ ಪ್ರಕಾರ, ಸಂತ್ರಸ್ತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗುವುದು. ಪಾಲಿಕೆ ಅರಣ್ಯ ಇಲಾಖೆಯು ಚಿಕಿತ್ಸಾ ವೆಚ್ಚ ಹಾಗೂ ಅಂತಿಮ ಸಂಸ್ಕಾರ ವೆಚ್ಚವನ್ನು ಭರಿಸಲಿದೆ ಎಂದು ಬಿಬಿಎಂಪಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಬಿ.ಎಲ್.ಜಿ.ಸ್ವಾಮಿ ತಿಳಿಸಿದ್ದಾರೆ.