ಮೈಸೂರು: ಎಲ್ಲ ನ್ಯಾಯಲಯಕ್ಕಿಂತ ಆತ್ಮಸಾಕ್ಷಿಯ ನ್ಯಾಯಾಲಯ ದೊಡ್ಡದು. ಸತ್ಯಕ್ಕೆ ಯಾವಾಗಲೂ ನ್ಯಾಯ ಸಿಗುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಇಂದು ಮೈಸೂರು ದಸರಾ 2024ನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ನನ್ನ ಆತ್ಮಸಾಕ್ಷಿ ಪ್ರಕಾರ ನಾನು ನಡೆಯುತ್ತಿದ್ದೇನೆ, ಆತ್ಮಸಾಕ್ಷಿಗೆ ಅನುಗುಣವಾಗಿ ನಾವು ನಡೆದುಕೊಳ್ಳುತ್ತಿದ್ದೇವೆ ಎಂದರು.
ಚುನಾಯಿತ ಸರ್ಕಾರವನ್ನು ಕಿತ್ತಾಕುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸ. ರಾಜ್ಯದ ಜನರ ಆಶೀರ್ವಾದದಿಂದ ನಾವು 136 ಸ್ಥಾನ ಗೆದ್ದಿದ್ದೇವೆ. 5 ವರ್ಷಗಳ ಅಭಿವೃದ್ಧಿ ಕೆಲಸ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ದೇವರಾಜ ಅರಸು ಬಿಟ್ಟರೆ ಸಿಎಂ ಆಗಿ 5 ವರ್ಷ ಪೂರೈಸಿದ್ದು ಸಿದ್ದರಾಮಯ್ಯ ಮಾತ್ರ ಎಂದು ಹೇಳಿರುವ ಜಿಟಿ ದೇವೇಗೌಡ ಮುಡಾದ ಸದಸ್ಯರಾಗಿದ್ದಾರೆ, ಅವರಿಗೆ ಸತ್ಯ ಗೊತ್ತಿದೆ. ಅದಕ್ಕೇ ಅವರು ಸತ್ಯ ಹೇಳಿದ್ದಾರೆ ಎಂದರು.
ಜನರ ಆಶೀರ್ವಾದ ಇರುವವರೆಗೂ ಯಾರು ಏನೂ ಮಾಡಲು ಆಗಲ್ಲ. ಜನರು, ಚಾಮುಂಡಿ ಆಶೀರ್ವಾದಿಂದ 2ನೇ ಬಾರಿ ಸಿಎಂ ಆಗಿದ್ದೇನೆ ಎಂದರು.
ಈ ವರ್ಷ ಉತ್ರಮ ಮಳೆಯಾಗಿದ್ದರಿಂದ ಎಲ್ಲ ನದಿಗಳು, ಜಲಾಶಯಗಳು ಬಹುತೇಕ ತುಂಬಿವೆ. ಮಳೆ ಬೆಳೆ ಸರಿಯಾಗಿ ಆದರೆ ಜನರು ಸುಖ ಶಾಂತಿ ನೆಮ್ಮದಿಯಿಂದ ಬಾಳಬಹುದಹ. ರೈತರ ಮುಖದಲ್ಲಿ ಮಂದಹಾಸ ಕಾಣಲು ಸಾಧ್ಯ, ಸಾಮಾನ್ಯ ಜನತೆಗೆ ಸಂತೋಷ ಜೀವನ ಸಿಗಲಿ ಎಂದು ಚಾಮುಂಡಿ ದೇವಿಯನ್ನು ಪ್ರಾರ್ಥಿಸಿದ್ದೇನೆ ಎಂದರು.
ಮೈಸೂರು ದಸರಾ ಅಂದರೆ ಒಂದು ರೀತಿ ರೋಮಾಂಚನ ಮತ್ತು ಹರ್ಷ. ಕಳೆದ ಬಾರಿ ಮೈಸೂರು ದಸರಾವನ್ನು ಸರಳವಾಗಿ ಆಚರಣೆ ಮಾಡಿದ್ದೆವು. ಈ ಬಾರಿ ಅದ್ದೂರಿಯಾಗಿ ನಾಡಹಬ್ಬವಾಗಿ ಮೈಸೂರು ದಸರಾ ಆಚರಣೆಗೆ ನಿರ್ಧಾರ ಮಾಡುತ್ತಿದ್ದೇವೆ. ಈ ಬಾರಿ ರಾಜ್ಯದಲ್ಲಿ ಶೇ 98.99ರಷ್ಟು ಬಿತ್ತನೆ ಕಾರ್ಯ ಆಗಿದೆ. ನಮ್ಮ ನಿರೀಕ್ಷೆಗಿಂತ ಹೆಚ್ಚು ಬೆಳೆ ಬೆಳೆಯಲೆಂದು ಪ್ರಾರ್ಥನೆ ಮಾಡುತ್ತೇನೆ ಎಂದರು.