ಕ್ರೀಡೆ ಸುದ್ದಿ

ಆಗಸ್ಟ್‌ 15ರಿಂದ ಮಹಾರಾಜ ಟ್ರೋಫಿ : ಹರಾಜಿನಲ್ಲಿ 700 ಆಟಗಾರರು

Share It

ಬೆಂಗಳೂರು: ಇದೇ ಆಗಸ್ಟ್‌ 15ರಿಂದ ಆರಂಭವಾಗಲಿರುವ 3ನೇ ಆವೃತ್ತಿಯ ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಲ್ಲ ಪಂದ್ಯಗಳೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ನಡೆದ ಟ್ರೋಫಿ ಅನಾವರಣ ಕಾರ್ಯಕ್ರಮ ಮತ್ತು ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಲಾಯಿತು. ಕ್ರಿಕೆಟ್ ದಂತಕಥೆ ಎರ್ರಪಳ್ಳಿ ಪ್ರಸನ್ನ ಅವರು ಟ್ರೋಫಿಯನ್ನು ಅನಾವರಣಗೊಳಿಸಿದರು.

‘ಮಳೆಗಾಲದ ಸಮಯವಾಗಿರುವುದರಿಂದ ಗ್ರಾಮಾಂತರ ವಿಭಾಗಗಳಾದ ಹುಬ್ಬಳ್ಳಿ, ಮೈಸೂರು ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸುವುದು ಕಷ್ಟ. ಬೆಂಗಳೂರಿನಲ್ಲಿ ಸಬ್‌ ಏರ್ ಸಿಸ್ಟಮ್ ಇರುವುದರಿಂದ ಮಳೆ ಬಂದರೂ ‍ಕ್ರೀಡಾಂಗಣವನ್ನು ಬೇಗನೆ ಪಂದ್ಯಕ್ಕೆ ಸಿದ್ಧಗೊಳಿಸಬಹುದು. ಅಲ್ಲದೇ ಅಧಿಕೃತ ಪ್ರಸಾರಕ ವಾಹಿನಿಗೆ ಬೆಂಗಳೂರಿನಲ್ಲಿ ಪಂದ್ಯಗಳು ನಡೆದರೆ ನೇರಪ್ರಸಾರಕ್ಕೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಕೆಎಸ್‌ಸಿಎ ಜಂಟಿ ಕಾರ್ಯದರ್ಶಿ ಶಾವೀರ್ ತಾರಾಪುರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿ ಬಾರಿ ಡಿವಿಷನ್ ಲೀಗ್, ಕ್ಲಬ್‌ ಲೀಗ್ ಟೂರ್ನಿಗಳ ಮೂಲಕ ಕೆಎಸ್‌ಸಿಎ ಋತುಗಳು ಆರಂಭವಾಗುತ್ತಿದ್ದವು. ಈ ವರ್ಷ ಫ್ರ್ಯಾಂಚೈಸಿ ಲೀಗ್‌ ಮೇಲೆ ಹೆಚ್ಚು ಗಮನ ನೀಡಿ ಋತು ಆರಂಭವಾಗುತ್ತಿದೆಯೇ ಎಂಬ ಪ್ರಶ್ನೆಗೆ ಶಾವೀರ್ ಪ್ರತಿಕ್ರಿಯಿಸಿದರು.

‘ಹಾಗೇನಿಲ್ಲ. ಈಗಾಗಲೇ ವಯೋಮಿತಿ ಕ್ಲಬ್‌ ಟೂರ್ನಿಗಳು ಆರಂಭವಾಗಿವೆ. 16 ವರ್ಷ ಹಾಗೂ 19 ವರ್ಷದೊಳಗಿನವರ ಅಂತರ ಕ್ಲಬ್ ಟೂರ್ನಿಗಳು ನಡೆಯುತ್ತಿವೆ. ಮೊದಲ 3 ಡಿವಿಷನ್ ಲೀಗ್ ಟೂರ್ನಿಗಳು ಇದೇ 29ರಿಂದ ಆರಂಭವಾಗಲಿವೆ. ಮಹಾರಾಜ ಟ್ರೋಫಿ ಟೂರ್ನಿ ಆರಂಭಕ್ಕೂ ಬಹಳ ಮುನ್ನವೇ ಡಿವಿಷನ್ ಲೀಗ್‌ಗಳನ್ನು ಯೋಜಿಸಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್, ರನ್ನರ್ಸ್ ಅಪ್ ಮೈಸೂರು ವಾರಿಯರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಟೂರ್ನಿಯಲ್ಲಿ ಆಡಲಿವೆ. ಜುಲೈ 25ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. 700 ಆಟಗಾರರು ಖರೀದಿಗೆ ಲಭ್ಯರಿದ್ದಾರೆ.

ಕಳೆದ ಋತುವಿನಲ್ಲಿ 3 ಕ್ಲಬ್‌ಗಳ ನಡುವೆ ಫಲಿತಾಂಶದ ಕುರಿತ ಆಕ್ಷೇಪದಿಂದಾಗಿ ಡಿವಿಷನ್ ಲೀಗ್ ಟೂರ್ನಿ ಮುಕ್ತಾಯವು ತಡವಾಗಿತ್ತು. ಅದರಿಂದಾಗಿ ಈ ಋತುವಿನ ಲೀಗ್ ಟೂರ್ನಿಗಳು ವಿಳಂಬವಾಗಿವೆ. ಕೇವಲ 16 ಮತ್ತು 19 ವರ್ಷದೊಳಗಿನವರ ಅಂತರ ಕ್ಲಬ್ ಟೂರ್ನಿಗಳನ್ನಷ್ಟೇ ಆರಂಭಿಸಲಾಗಿದೆ. ಇದು ರಾಜ್ಯ ಕ್ರಿಕೆಟ್ ವಲಯದಲ್ಲಿ ಟೀಕೆಗಳಿಗೆ ಗ್ರಾಸವಾಗಿತ್ತು.

ಮಹಾರಾಜ ಟ್ರೋಫಿ ಟೂರ್ನಿಯ ಮೂಲಕ ಉದಯೋನ್ಮುಖ ಆಟಗಾರರಿಗೆ ಪ್ರತಿಭೆ ತೋರುವ ಅವಕಾಶ ಒದಗಿಸಿದೆ. ರಾಜ್ಯ ರಾಷ್ಟ್ರ ತಂಡಗಳಿಗೆ ಆಡಲು ಈ ಟೂರ್ನಿಯು ಸಹಕಾರಿಯಾಗಲಿ
– ಎರ್ರಪಳ್ಳಿ ಪ್ರಸನ್ನ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ


Share It

You cannot copy content of this page