ಉಪಯುಕ್ತ ರಾಜಕೀಯ ಸುದ್ದಿ

ಮಹಾರಾಷ್ಟ್ರ ಆಯ್ತು, ಈಗ ಆಂಧ್ರಪ್ರದೇಶದಲ್ಲೂ ಕನ್ನಡಕ್ಕೆ ಕುತ್ತು..!

Share It

ಬೆಳಗಾವಿ : ಕರ್ನಾಟಕದ ನೆರೆ ರಾಜ್ಯವಾದ ಆಂಧ್ರಪ್ರದೇಶದಲ್ಲೂ ಸಹ ಕನ್ನಡ ಭಾಷೆಗೆ ಹಾಗೂ ಕನ್ನಡ ಕಲಿಕೆಗೆ ಕೊಡಲಿ ಪೆಟ್ಟು ನೀಡುವಂತಹ ಶಿಕ್ಷಣ ನೀತಿಯನ್ನು ಅನುಸರಿಸಲು ಆರಂಭಿಸಲಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ಆಂದ್ರಪ್ರದೇಶದ 1೦೦೦ ಮಾಧ್ಯಮಿಕ ಶಾಲೆಗಳಲ್ಲಿ ಸಿ.ಬಿ.ಎಸ್.ಸಿ. ಪಠ್ಯಕ್ರಮವನ್ನು ಅನುಷ್ಠಾನಗೊಳಿಸಲು ಅಲ್ಲಿಯ ಸರಕಾರ ನಿರ್ಧರಿಸಿದೆ.

ಈ ಬಗ್ಗೆ ಬೆಳಗಾವಿಯ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ರಾಜ್ಯ ಸರಕಾರದ ಗಮನ ಸೆಳೆದಿದ್ದಾರೆ. ಈ ಪಠ್ಯಕ್ರಮದ ಅನ್ವಯ ಮೊದಲನೆಯ ವಿಷಯವನ್ನಾಗಿ ಇಂಗ್ಲೀಷ್ ಮತ್ತು ಸಾಹಿತ್ಯ, ಎರಡನೇ ವಿಷಯವಾಗಿ ತೆಲುಗು, ಮೂರನೇ ವಿಷಯವನ್ನಾಗಿ ಗಣಿತ, ನಾಲ್ಕನೇ ವಿಷಯವನ್ನಾಗಿ ವಿಜ್ಞಾನ, ಐದನೇ ವಿಷಯವನ್ನಾಗಿ ಸಮಾಜ, ಆರನೇ ವಿಷಯವನ್ನಾಗಿ ಮಾಹಿತಿ ತಂತ್ರಜ್ಞಾನ ಅಥವಾ ಕೃತಕ ಬುದ್ದಿಮತ್ತೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಸಿ.ಬಿ.ಎಸ್.ಸಿ. ಪಠ್ಯಕ್ರಮದ ಪ್ರಕಾರ ಕನ್ನಡಿಗರ ಮಕ್ಕಳು ಕನ್ನಡ ಆಯ್ಕೆ ಮಾಡಿಕೊಳ್ಳವ ಅವಕಾಶವೇ ಇಲ್ಲ. ಕರ್ನೂಲು ಜಿಲ್ಲೆಯ ಹೊಳಗುಂದ ಜಿಲ್ಲಾ ಪರಿಷತ್ ಪ್ರೌಢಶಾಲಾ ದೊಡ್ಡಹರಿವಾಣದ ಜಿಲ್ಲಾ ಪರಿಷತ್ ಪೌಢಶಾಲೆ ಕೌತಾಳಂ ಜಿಲ್ಲಾ ಪರಿಷತ್ ಪ್ರೌಢಶಾಲಾ ಹಾಗೂ ಬದನಹಾಳು ಜಿಲ್ಲಾ ಪರಿಷತ್ ಪ್ರೌಢಶಾಲೆಗಳಲ್ಲಿ ಕನ್ನಡಿಗರ ಮಕ್ಕಳು ಅನಿವಾರ್ಯವಾಗಿ ಇಂಗ್ಲೀಷ್ ಅಥವಾ ತೆಲುಗು ಮಾಧ್ಯಮದಲ್ಲಿಯೇ ಕಲಿಯಬೇಕಾಗಿದೆ.

ಈವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳಿಗೆ, ಆಂಧ್ರಪ್ರದೇಶ ಸರಕಾರ ದಿ. ೦7-1೦-2023 ರ ಆದೇಶದಿಂದಾಗಿ ಕೊಡಲಿ ಪೆಟ್ಟು ಹಾಕಿದಂತಾಗಿದೆ. ಆಂಧ್ರಪ್ರದೇಶದ ಗಡಿಯಲ್ಲಿರುವ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರು ಸರಕಾರದ ಆದೇಶದ ವಿರುದ್ಧ ಆಂದೋಲನ ನಡೆಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.

ಕರ್ನಾಟದಲ್ಲಿರುವ ತೆಲಗು ಭಾಷಾ ಅಲ್ಪಸಂಖ್ಯಾತರಿಗೆ ನಮ್ಮ ಸರಕಾರ ಸಾಕಷ್ಟು ಶೈಕ್ಷಣಿಕ ಸೌಲಭ್ಯ ಒದಗಿಸುತ್ತ ಬಂದಿದೆ. ಆದರೆ, ಆಂಧ್ರಪ್ರದೇಶ ಕನ್ನಡದ ಕತ್ತು ಹಿಸುಕುವ ಕೆಲಸವನ್ನು ಮಾಡುತ್ತಿರುವುದು ಖಂಡನೀಯವಾಗಿದೆ. ಈ ಹಿನ್ನೆಲೆಯಲ್ಲಿ ತಾವು ಆಂಧ್ರಪ್ರದೇಶದ ಸರಕಾರದೊಡನೆ ಅಲ್ಲಿನ ಶಿಕ್ಷಣ ನೀತಿಯ ಬಗ್ಗೆ ಚರ್ಚಿಸಿ ಕನ್ನಡಿಗರ ಹಾಗೂ ಕನ್ನಡಿಗರ ಮಕ್ಕಳ ಹಿತವನ್ನು ಕಾಪಾಡಬೇಕೆಂದು ಕೋರುತ್ತೇವೆ ಎಂದು ಅವರು ತಿಳಿಸಿದ್ದಾರೆ.


Share It

You cannot copy content of this page